Health benefits of nutmeg and nutmeg flower: ಚಿಕನ್ ಬಿರಿಯಾನಿ ಎಂದರೆ ಸಾಕು ತುಂಬಾ ಜನರು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಮನೆಯಲ್ಲಿ ಮತ್ತು ರೆಸ್ಟೋರೆಂಟ್‌ನಲ್ಲಿ ತಿಂಗಳಿಗೆ ಎರಡು ಅಥವಾ ಮೂರು ಬಾರಿ ಬಿರಿಯಾನಿ ತಿನ್ನುವವರು ಅನೇಕ ಜನರಿದ್ದಾರೆ. ಬಿರಿಯಾನಿಯಲ್ಲಿ ಬಳಸುವ ಲವಂಗ ಹಾಗೂ ಏಲಕ್ಕಿಯಂತಹ ಮಸಾಲೆಗಳು ಅದರ ರುಚಿಗೆ ಮುಖ್ಯ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ, ಬಿರಿಯಾನಿ ರುಚಿಯ ರಹಸ್ಯದ ಹಿಂದೆ ಮತ್ತೊಂದು ಮಸಾಲೆ ಇದೆ ಎಂದು ನಿಮಗೆ ಗೊತ್ತಿದೆಯೇ? 'ಲವಂಗ' ನಾವು ಮನೆಯಲ್ಲಿ ಮಾಡುವ ಅಡುಗೆಗೆ ಹೆಚ್ಚು ಬಳಸುವ ಮಸಾಲೆ ಪದಾರ್ಥ.
'ದಾಲ್ಚಿನ್ನಿ' ಎಂಬುದು ಮರದ ತೊಗಟೆ. 'ಕೇಸರಿ' ಹೂವಿನ ಒಳಗೆ ಎಳೆಗಳಂತೆ ಇರುತ್ತದೆ. ಇವೆಲ್ಲವೂ ವಿವಿಧ ಮರ, ಸಸ್ಯಗಳಿಂದ ದೊರೆಯುವ ವಿಭಿನ್ನ ಮಸಾಲೆಗಳಾಗಿವೆ. ಜಾಯಿಕಾಯಿ ಮತ್ತು ಜಾಪತ್ರೆ ಕೂಡ ನಾನ್ವೆಜ್ ಭಕ್ಷ್ಯಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳಾಗಿವೆ. ಆದರೆ, ಇಲ್ಲೊಂದು ವಿಶೇಷವೇನು ಅಂದರೆ, ಎರಡೂ ಒಂದೇ ಮರದಿಂದ ಲಭಿಸುವ ಪದಾರ್ಥಗಳಾಗಿವೆ. ಆದ್ರೆ, ವಿಭಿನ್ನ ಸುವಾಸನೆಯೊಂದಿಗೆ ಎರಡು ಮಸಾಲೆ ಪದಾರ್ಥಗಳನ್ನು ನೀಡುವ ವಿಶ್ವದ ಏಕೈಕ ಮರ ಇದಾಗಿದೆ. ಇವುಗಳ ಔಷಧೀಯ ಗುಣಗಳನ್ನು ಬಗ್ಗೆ ಇದೀಗ ತಿಳಿಯೋಣ.
ಬಿರಿಯಾನಿ ಸಿದ್ಧಪಡಿಸಲು, ಚಿಕನ್ ಅಡುಗೆಗಳಲ್ಲಿ ಹಾಗೂ ಕೇಕ್‌ಗೆ ಉತ್ತಮ ಪರಿಮಳ ಬರಲು ಸ್ವಲ್ಪ ಜಾಯಿಕಾಯಿ ಪುಡಿ ಮತ್ತು ಜಾಪತ್ರೆಯನ್ನು ಸೇರಿಸಬೇಕು. ಮಾಂಸಾಹಾರಿ ಖಾದ್ಯಗಳಲ್ಲಿ ಕಾಳುಮೆಣಸು, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿಯಂತಹ ಇತರ ಮಸಾಲೆಗಳೊಂದಿಗೆ ಜಾಯಿಕಾಯಿ ಮತ್ತು ಜಾಪತ್ರೆಯನ್ನು ಸೇರಿಸುವುದರಿಂದ ಆ ಭಕ್ಷ್ಯಗಳಿಗೆ ಉತ್ತಮ ರುಚಿ ಬರುತ್ತದೆ.
ಒಂದೇ ಮರದಿಂದ ಎರಡೂ ಮಸಾಲೆ ಪದಾರ್ಥಗಳು: ಜಾಯಿಕಾಯಿ- ಚಿಕ್ಕ ಬಾರೆ ಹಣ್ಣಿನ ಗಾತ್ರದಂತಿರುವ ಜಾಯಿಕಾಯಿಯ ಗಟ್ಟಿಯಾದ ಬೀಜ. ಜಾಪತ್ರೆ - ಹೂವಿನಂತೆ ಕಾಣುತ್ತದೆ. ಈ ಎರಡರ ರುಚಿ ಒಂದೇ ಅಲ್ಲ. ಜಾಯಿಕಾಯಿ ಕಟುವಾದ ಸಿಹಿ ಪರಿಮಳವನ್ನು ಹೊಂದಿರುತ್ತದೆ. ಅಲ್ಲದೆ, ಜಾಪತ್ರೆ ಸಿಹಿ ಮತ್ತು ಕಹಿ ರುಚಿಯಿಂದ ಕೂಡಿದೆ. ಈ ಎರಡು ಮಸಾಲೆ ಪಾದಾರ್ಥಗಳ ಸುವಾನೆ ಬೇರೆ ಬೇರೆಯಾಗಿರುತ್ತದೆ. ಅದಕ್ಕಾಗಿಯೇ ಇವುಗಳನ್ನು ಎರಡು ರೀತಿಯ ಮಸಾಲೆಗಳಾಗಿ ಬಳಸುತ್ತೇವೆ. ಎರಡನ್ನೂ ಮಸಾಲೆ ಭಕ್ಷ್ಯಗಳು, ಸಿಹಿತಿಂಡಿಗಳು, ಬೇಕರಿ ಉತ್ಪನ್ನಗಳು, ಸಾಸೇಜ್‌ಗಳು ಮತ್ತು ವಿವಿಧ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಅವುಗಳಿಂದ ತೆಗೆದ ಕೆಲವು ರೀತಿಯ ಸಾರಭೂತ ತೈಲ, ಸುಗಂಧ ದ್ರವ್ಯಗಳು, ಔಷಧಿಗಳು ಮತ್ತು ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಎರಡನೇ ಸ್ಥಾನದಲ್ಲಿ ಭಾರತ: ಇಂಡೋನೇಷ್ಯಾದ ಬಂದಾ ದ್ವೀಪಗಳಲ್ಲಿ ಜಾಯಿಕಾಯಿ ಮರಗಳು ಮೊದಲು ಕಂಡುಬಂದವು. ನಂತರ ಅದು ಕ್ರಮೇಣ ಮಲೇಷ್ಯಾ, ಸಿಂಗಾಪುರ ಮತ್ತು ಶ್ರೀಲಂಕಾ ತಲುಪಿತು. ಜಾಯಿಕಾಯಿಯನ್ನು ಈಗ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಜಾಯಿಕಾಯಿ ರಫ್ತು ಮಾಡುವ ದೇಶವಾಗಿದೆ.
ಬೇಡಿಕೆ ಹೆಚ್ಚಾಗಲು ಕಾರಣ ಗೊತ್ತಾ?
ಜಾಯಿಕಾಯಿ ಮತ್ತು ಜಾಪತ್ರೆಯಲ್ಲಿ ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳಲ್ಲಿರುವ ಮಿರಿಸ್ಟಿಸಿನ್ ಮತ್ತು ಮೆಸ್ಲಿಗ್ನಾನ್ ಪದಾರ್ಥಗಳು ವಿಶೇಷವಾಗಿ ಶಕ್ತಿಯುತವಾಗಿವೆ ಎಂದು ತಜ್ಞರು ಹೇಳುತ್ತಾರೆ. ಆಯುರ್ವೇದದಲ್ಲಿ ಇದನ್ನು ವಾಂತಿ, ಭೇದಿ, ಗ್ಯಾಸ್ ಮತ್ತು ಹೊಟ್ಟೆನೋವು ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಿದ್ರಾಹೀನತೆ, ಮೂತ್ರಪಿಂಡದ ತೊಂದರೆಗಳು ಮತ್ತು ಕೆಮ್ಮು ಮುಂತಾದ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಈ ಎರಡನ್ನೂ ಬಳಸಲಾಗುತ್ತದೆ.
ಜಾಯಿಕಾಯಿಯ ಲಾಭಗಳೇನು?
- ಜಾಯಿಕಾಯಿ ರಕ್ತ ಪರಿಚಲನೆ ಸುಧಾರಿಸಲು ಪೂರಕವಾಗಿದೆ. ಇದು ಮೇದೋಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿಡಲು ಕೂಡ ಸಹಾಯ ಮಾಡುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
- ಬೇಗನೇ ವಯಸ್ಸಾಗುವಂತಹ ಸಮಸ್ಯೆಗಳನ್ನು ತಡೆಯುತ್ತದೆ.
- ಹೃದಯ, ಯಕೃತ್ತು ಹಾಗೂ ಕ್ಯಾನ್ಸರ್ ರೋಗಗಳನ್ನು ತಡೆಯುತ್ತದೆ.
- ಇದು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ಆಯುರ್ವೇದದ ವೈದ್ಯರು ಹೇಳುತ್ತಾರೆ.
- ಇದರಲ್ಲಿರುವ ಮಿರಿಸ್ಟಿಸಿನ್ - ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಆಲ್ಝೈಮರ್ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ.
- ಜಾಯಿಕಾಯಿಯು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಜೊತೆಗೆ ಸಂಧಿವಾತವನ್ನು ಕಡಿಮೆ ಮಾಡುತ್ತದೆ.
- ಇದು ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಜೊತೆಗೆ ವೀರ್ಯ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.
- ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ಇದು ತಲೆನೋವಿಗಿಂತ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
- ರಾತ್ರಿ ಆಹಾರ, ಹಾಲಿನಲ್ಲಿ ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಸೇರಿಸುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.
ಜಾಪತ್ರೆಯ ಪ್ರಯೋಜನಗಳು:
- ಕೆಂಪು ಬಣ್ಣ ಅಥವಾ ಕಿತ್ತಳೆ ಹೂವಿನಂತೆ ' ಜಾಪತ್ರೆ' ಕಾಣಿಸುತ್ತದೆ. ನೆಗಡಿ, ಕೆಮ್ಮು, ಜ್ವರ ಮತ್ತು ಅಸ್ತಮಾಗೆ ಕಾರಣವಾಗುವ ವೈರಾಣುಗಳ ವಿರುದ್ಧ ಹೋರಾಡುವ ಗುಣ ಜಾಪತ್ರೆಯಲ್ಲಿದೆ. ಅದಕ್ಕಾಗಿಯೇ ಇದನ್ನು ಆಯಾ ಟಾನಿಕ್ಗಳಲ್ಲಿ ಬಳಸಲಾಗುತ್ತದೆ.
- ಜಪಾತ್ರೆ ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದಯದ ಆರೋಗ್ಯಕ್ಕೆ ಟ್ಯಾಬ್ಲೆಟ್‌ನಂತೆ ಕೆಲಸ ಮಾಡುತ್ತದೆ ತಜ್ಞರು ತಿಳಿಸುತ್ತಾರೆ.
- ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಗುಣ ಜಾಪತ್ರೆಗೆ ಇದೆ.
- ಇದರಲ್ಲಿರುವ ಯುಜೆನಾಲ್ ಹಲ್ಲು ನೋವಿಗೆ ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.
- ಮೇಸ್ ಲಿಗ್ನಾನ್ ನ್ಯೂರಾನ್‌ಗಳನ್ನು ಉತ್ತೇಜಿಸುವ ಮೂಲಕ ಏಕಾಗ್ರತೆ ಹಾಗೂ ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ.
- ಇವೆರಡನ್ನೂ ಪುಡಿ ರೂಪದಲ್ಲಿ ತಯಾರಿಸಬಹುದು ಹಾಗೂ ಸೂಪ್, ಚಹಾ, ಕಾಫಿಗಳು ಮತ್ತು ಹಣ್ಣುಗಳ ಮೇಲೆ ಸಿಂಪಡಿಸಬಹುದು.
- ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಬಳಕೆ ಮಾಡುವ ಜಾಪತ್ರೆ ಪುಡಿ ಕಾಲು ಅಥವಾ ಅರ್ಧ ಟೀಸ್ಪೂನ್ ಮೀರಬಾರದು.
- ಜಾಪತ್ರೆ ವಿಶೇಷವಾಗಿ ಅಧಿಕವಾಗಿ ಬಳಕೆ ಮಾಡಿದರೆ, ಭ್ರಮೆಯನ್ನು ಉಂಟುಮಾಡಬಹುದು. ಆದ್ದರಿಂದ ಈ ಬಗ್ಗೆ ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು
- https://pmc.ncbi.nlm.nih.gov/articles/PMC3354425/
- https://www.healthline.com/nutrition/nutmeg-benefits#TOC_TITLE_HDR_2
ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಶುಗರ್ ಪೇಷಂಟ್ಗಳು ಭಯಪಡದೆ ಈ ಹಣ್ಣುಗಳನ್ನು ಸೇವಿಸಬಹುದು, ಸಕ್ಕರೆ ಮಟ್ಟ ಹೆಚ್ಚೋದಿಲ್ಲ: ತಜ್ಞರ ಸಲಹೆ