ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆರಿಗೆ ವೇಳೆ ಮಹಿಳೆಯರ ಆರೈಕೆ ಸುಧಾರಣೆ ಮತ್ತು ಅನಗತ್ಯ ಸಿಸೇರಿಯನ್ ಸೆಕ್ಷನ್ ಹೆರಿಗೆಯನ್ನು ಕಡಿಮೆ ಮಾಡಬಹುದು ಎಂದು ಭಾರತದಲ್ಲಿ ನಡೆಸಿದ ಅಧ್ಯಯನವೊಂದು ತಿಳಿಸಿದೆ.
ಸಿ ಸೆಕ್ಷನ್ ಹೆಚ್ಚಳ ಪ್ರವೃತ್ತಿ ಕುರಿತು ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕವಾಗಿ ಐದರಲ್ಲಿ ಒಂದು ಮಗು ಸಿ ಸೆಕ್ಷನ್ ಮೂಲಕ ಜನಿಸುತ್ತಿದೆ. ಮುಂದಿನ ದಶಕದಲ್ಲಿ ಈ ಸಂಖ್ಯೆಯು ಏರಿಕೆ ಕಾಣಲಿದ್ದು, ಮೂರನೇ ಒಂದು ಭಾಗದಷ್ಟು ಪ್ರಮಾಣದಲ್ಲಿ ಏರಿಕೆ ಆಗಬಹುದು ಎಂದಿದೆ.
ವೈದ್ಯಕೀಯ ಉದ್ದೇಶಕ್ಕಾಗಿ ನಡೆಸುವ ಸಿಸೇರಿಯನ್ ಸೆಕ್ಷನ್ ಹೆರಿಗೆಯು ಜೀವ ಉಳಿಸಬಹುದು. ಇದು ಉತ್ತಮ ವೈದ್ಯಕೀಯ ಆರೈಕೆಯ ಜೊತೆಗೆ ಹಲವು ಅಪಾಯಗಳನ್ನು ಕೂಡ ಹೊಂದಿದೆ.
ಈ ಅಧ್ಯಯನವನ್ನು ಜರ್ನಲ್ ನೇಚರ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ. ಡಬ್ಲ್ಯೂಎಚ್ಒನ ಲೇಬರ್ ಕೇರ್ ಗೈಡ್ (ಹೆರಿಗೆ ಆರೈಕೆ ಮಾರ್ಗಸೂಚಿ- ಎಲ್ಸಿಜಿ) ವಿಶ್ವದ ಮೊದಲ ಯಾದೃಚ್ಛಿಕ ಪ್ರಯೋಗವಾಗಿದೆ. ಈ ತಂಡದಲ್ಲಿ ಕರ್ನಾಟಕದ ಜವಾಹರ್ಲಾಲ್ ನೆಹರು ಮೆಡಿಕಲ್ ಕಾಲೇಜ್ ಸಂಶೋಧಕರು ಪಾಲ್ಗೊಂಡಿದ್ದಾರೆ. ಈ ಕುರಿತು ದೇಶದ ನಾಲ್ಕು ಆಸ್ಪತ್ರೆಗಳಲ್ಲಿ ಮೊದಲ ಪ್ರಯೋಗವನ್ನು ನಡೆಸಲಾಗಿದ್ದು, ಎಲ್ಸಿಜಿ ತಂತ್ರಗಾರಿಕೆಯ ಅಳವಡಿಕೆ ಮೌಲ್ಯಮಾಪವನ್ನು ಮಾಡಲಾಗಿದ್ದು, ಅದನ್ನು ಸಾಮಾನ್ಯ ಆರೈಕೆಯೊಂದಿಗೆ ಹೋಲಿಕೆ ಮಾಡಲಾಗಿದೆ.
ಈ ಅಧ್ಯಯನ, ನಿಯಮಿತ ಸಂಪನ್ಮೂಲ ಸೌಲಭ್ಯ ಹೊಂದಿರುವ ರೂಟಿನ್ ಕ್ಲಿನಿಕಲ್ ಕೇರ್ನಲ್ಲಿ ಎಲ್ಸಿಜಿ ಅಳವಡಿಕೆ ಸಾಧ್ಯ ಎಂಬುದನ್ನು ತೋರಿಸಿದೆ ಎಂದು ಆಸ್ಟ್ರೇಲಿಯಾದ ಬುರ್ನೆಟ್ ಇನ್ಸ್ ಟಿಟ್ಯೂಟ್ನ ಪ್ರೊ. ಮತ್ತು ಅಧ್ಯಯನದ ಪ್ರಮುಖ ಲೇಖಕ ಜೊಶುವ ವೊಗೆಲ್ ತಿಳಿಸಿದ್ದಾರೆ.