ಅಲ್ಬುಕರ್ಕ್: (ಮೆಕ್ಸಿಕೋ):ಮಾರಣಾಂತಿಕ ಕಾಯಿಲೆ ತರುವ ಹೆಚ್ಐವಿ ವೈರಸ್ ಸೋಂಕಿತ ವ್ಯಕ್ತಿಗೆ ಬಳಸಲಾದ ಸಿರಿಂಜ್, ಸೂಜಿಯನ್ನು ಇತರರಿಗೆ ಬಳಕೆ ಮಾಡಿದಾಗ ಅದು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಹಲವು ಪ್ರಕರಣಗಳು ಈಗಾಗಲೇ ದೃಢಪಟ್ಟಿವೆ. ಆದರೆ, ಸೌಂದರ್ಯವರ್ಧಕ ಸ್ಪಾದಲ್ಲಿ ಬಳಸಿದ ಸೂಜಿಗಳಿಂದ ಮೂವರು ಮಹಿಳೆಯರಲ್ಲಿ ವೈರಸ್ ಪತ್ತೆಯಾಗಿದೆ. ಇಂತಹ ಪ್ರಕರಣ ದಾಖಲಾಗಿದ್ದು, ಇದೇ ಮೊದಲಾಗಿದೆ.
ನ್ಯೂ ಮೆಕ್ಸಿಕೋದ ಸೌಂದರ್ಯವರ್ಧಕ ಸ್ಪಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮರುಬಳಕೆ ಮಾಡಲಾದ ವಸ್ತುಗಳಿಂದ ರೋಗ ಹರಡಿದೆ ಎಂಬುದನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.
2018 ರಿಂದ 2023 ರೊಳಗೆ ಸ್ಪಾದಲ್ಲಿ ಬಳಕೆ ಮಾಡಲಾದ ಸಾಧನಗಳನ್ನು ಮರುಬಳಕೆ ಮಾಡಿರುವುದು ಪತ್ತೆಯಾಗಿದೆ. ಇದರಿಂದಾಗಿ ಮಹಿಳೆಯರು ಹೆಚ್ಐವಿ ಸೋಂಕಿಗೆ ಗುರಿಯಾಗಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವರದಿ ಹೇಳಿದೆ.
ಚುಚ್ಚುಮದ್ದಿನ ಮೂಲಕ ಕಲುಷಿತ ರಕ್ತದಿಂದ HIV ಹರಡುವಿಕೆಯು ತಿಳಿದಿರುವ ಅಪಾಯವಾಗಿದೆ. ಸೌಂದರ್ಯವರ್ಧಕ ಸೇವೆಗಳಲ್ಲಿ ಬಳಸಲಾದ ವಸ್ತುಗಳಿಂದ ವೈರಸ್ ಹರಡಿರುವುದು ಮೊದಲ ಸಲವಾಗಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಎಲ್ಲೆಲ್ಲಿ ಸೂಜಿಗಳ ಬಳಕೆ ಮಾಡ್ತಾರೆ:ಅನೇಕ ಜನಪ್ರಿಯ ಕಾಸ್ಮೆಟಿಕ್ ಚಿಕಿತ್ಸೆಗಳಲ್ಲಿ ಸೂಜಿಯನ್ನು ಬಳಸಲಾಗುತ್ತದೆ. ಉದಾಹರಣೆಗೆ ಮುಖದ ಸುಕ್ಕುಗಳನ್ನು ತುಂಬಲು ಬೊಟೊಕ್ಸ್ ಮತ್ತು ತುಟಿಗಳನ್ನು ಉಬ್ಬರಿಸಲು ಫಿಲ್ಲರ್‌ಗಳನ್ನು ಬಳಸುತ್ತಾರೆ. ಫೇಶಿಯಲ್, ಪ್ಲೇಟ್‌ಲೆಟ್-ರಿಚ್ ಪ್ಲಾಸ್ಮಾ ಮೈಕ್ರೊನೀಡ್ಲಿಂಗ್ ಸಿಸ್ಟಮ್, ವ್ಯಕ್ತಿಯ ರಕ್ತವನ್ನು ಹೊರತೆಗೆಯಲು, ಚರ್ಮದ ಕಾಂತಿಯನ್ನು ಹೆಚ್ಚಿಸಲು ಮುಖಕ್ಕೆ ಪ್ಲಾಸ್ಮಾ ಥೆರಪಿ ವೇಳೆ ಸಣ್ಣ ಪ್ರಮಾಣದ ಸೂಜಿಗಳ ಬಳಕೆ, ಟ್ಯಾಟೂ ಹಾಕಲೂ ಸೂಜಿಗಳನ್ನು ಬಳಕೆ ಮಾಡಲಾಗುತ್ತದೆ.
ನ್ಯೂ ಮೆಕ್ಸಿಕೋ ಆರೋಗ್ಯ ಇಲಾಖೆಯು, 2018 ರಲ್ಲಿ ಸ್ಪಾ ಬಗ್ಗೆ ತನಿಖೆ ಪ್ರಾರಂಭಿಸಿತ್ತು. 40 ರ ಪ್ರಾಯದ ಮಹಿಳೆಗೆ ಯಾವುದೇ ಅಪಾಯಕಾರಿ ಅಂಶಗಳಿಲ್ಲದಿದ್ದರೂ ಸಹ ಹೆಚ್ಐವಿ ಸೋಂಕು ಧನಾತ್ಮಕ ವರದಿ ಬಂದಿತ್ತು. ಈಕೆ ಇದೇ ಸ್ಪಾದಲ್ಲಿ ಸೌಂದರ್ಯವರ್ಧಕ ಚಿಕಿತ್ಸೆಗೆ ಒಳಗಾಗಿದ್ದರು ಎಂಬುದನ್ನು ವರದಿ ಉಲ್ಲೇಖಿಸಿದೆ.
ಇದಾದ ಬಳಿಕ ಸೌಂದರ್ಯವರ್ಧಕ ಸ್ಪಾದಿಂದಲೇ ಮಹಿಳೆಯರಿಗೆ ಸೋಂಕು ತಾಕಿದೆ ಎಂಬುದು ದೃಢವಾದ ಬಳಿಕ ಅಂಗಡಿಯನ್ನು ಮುಚ್ಚಲಾಯಿತು. ಪರವಾನಗಿ ಇಲ್ಲದೇ, ಸ್ಪಾ ನಡೆಸುತ್ತಿದ್ದ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು.
ಕಾಸ್ಮೆಟಿಕ್ ವಿಧಾನದಲ್ಲಿ ಸೂಜಿಗಳನ್ನು ಮರುಬಳಕೆ ಮಾಡುವುದು ಅಪಾಯಕಾರಿ ಎಂಬುದನ್ನು ಈ ಪ್ರಕರಣ ಎಚ್ಚರಿಸಿದೆ. ಇಂತಹ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ವಹಿಸಬೇಕಾದ ಕ್ರಮದ ಬಗ್ಗೆ ವರದಿ ಜಾಗೃತಿ ಮೂಡಿಸಿದೆ.
ಇದನ್ನೂ ಓದಿ:ಸುಟ್ಟ ಗಾಯಗಳ ಮೇಲೆ ತಕ್ಷಣಕ್ಕೆ ಐಸ್ ಇಡಬೇಡಿ, ಬದಲಾಗಿ ಈ ಕ್ರಮ ಅನುಸರಿಸಿ: ಯಾವುದಾ ಟ್ರೀಟ್ಮೆಂಟ್? - how to treat burn injuries