ಕೋಯಿಕ್ಕೋಡ್, ಕೇರಳ: ಕೇರಳದಲ್ಲಿ ನಿಫಾ ವೈರಸ್ ಸೋಂಕಿಗೆ ಭಾನುವಾರ 14 ವರ್ಷದ ಬಾಲಕ ಸಾವನ್ನಪ್ಪಿದ್ದು, ಈ ಬೆನ್ನಲ್ಲೇ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ (ಐಸಿಎಂಆರ್) ತಂಡ ಕೋಯಿಕ್ಕೋಡ್ಗೆ ಆಗಮಿಸಿದೆ.
ಐಸಿಎಂಆರ್ ತಂಡದಲ್ಲಿ ನಾಲ್ವರು ವೈದ್ಯರು ಮತ್ತು ಇಬ್ಬರು ತಂತ್ರಜ್ಞರು ಇದ್ದು, ಇವರು ಸೋಂಕಿತ ತಡೆ ವಿಧಾನ, ಪರೀಕ್ಷೆ ಸೌಲಭ್ಯ ಮತ್ತು ಚಿಕಿತ್ಸೆ ಪ್ರಕ್ರಿಯೆ ಕುರಿತು ರಾಜ್ಯ ಆರೋಗ್ಯ ಇಲಾಖೆ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಸ್ತತ, ಕೋಯಿಕ್ಕೋಡ್ನ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿರುವ 68 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕಿನ ಸಂಶಯ ಎದುರಾಗಿದೆ. ಪ್ರಸ್ತುತ ಅವರ ಪ್ರಾಥಮಿಕ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದಿದ್ದು, ಐಸಿಯುನಲ್ಲಿರುವ ಅವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.
ಸುಲಭ ಪರೀಕ್ಷೆ ಮತ್ತು ತಕ್ಷಣದ ಫಲಿತಾಂಶಕ್ಕಾಗಿ ಇಂದು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಮೊಬೈಲ್ ಬಿಎಸ್ಎಲ್- 3 ಲ್ಯಾಬೋರೇಟರಿ ಬರಲಿದೆ. ಸಾವನ್ನಪ್ಪಿದ ಬಾಲಕನಿಗೆ ನೇರ ಸಂಪರ್ಕಕ್ಕೆ ಒಳಗಾದ ಆರು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಫಲಿತಾಂಶ ಕೂಡ ನೆಗೆಟಿವ್ ಬಂದಿದೆ. ಜೊತೆಗೆ ಬಾಲಕನ ಸಂಪರ್ಕದಲ್ಲಿದ್ದ 330 ಜನರು ಮತ್ತು 68 ಆರೋಗ್ಯ ಕಾರ್ಯಕರ್ತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.