ಚಹಾ ಮತ್ತು ಕಾಫಿ. ಹೆಚ್ಚಿನವರಿಗೆ ಇವುಗಳನ್ನು ಸೇವಿಸದಿದ್ದರೆ ದಿನ ಕಳೆಯುವುದಿಲ್ಲ. ಇತರರು ಗಂಟೆಗೊಮ್ಮೆ ಟೀ ಅಥವಾ ಕಾಫಿ ಕುಡಿಯುತ್ತಾರೆ. ಟೀ ಮತ್ತು ಕಾಫಿ ಕುಡಿದರೆ ಮೈಂಡ್ ರಿಲಾಕ್ಸ್ ಆಗುತ್ತದೆ ಎಂದು ಸಮಯಕ್ಕೆ ಸಂಬಂಧವಿಲ್ಲದಂತೆ ಸೇವಿಸುತ್ತಿರುತ್ತಾರೆ. ಇನ್ನು ಊಟಕ್ಕೂ ಮುನ್ನ ಮತ್ತು ನಂತರ ಬಿಸಿಬಿಸಿ ಚಹಾ, ಕಾಫಿ ಕುಡಿಯುವ ಬಹಳಷ್ಟು ಜನರಿದ್ದಾರೆ. ಆದರೆ ಊಟಕ್ಕೂ ಮುನ್ನ ಮತ್ತು ನಂತರ ಇವುಗಳನ್ನು ಸೇವಿಸುವುದು ಅತ್ಯಂತ ಅಪಾಯಕಾರಿ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಇತ್ತೀಚೆಗೆ ಬಹಿರಂಗಪಡಿಸಿದೆ. ಜೊತೆಗೆ ಟೀ, ಕಾಫಿ ಸೇವಿಸುವುದರಿಂದ ಉಂಟಾಗುವ ಅನಾನುಕೂಲಗಳನ್ನು ವಿವರಿಸಿ ಇವುಗಳಿಂದ ದೂರವಿರಲು ಸೂಚಿಸಿದೆ.
ಉತ್ತಮ ಆರೋಗ್ಯಕ್ಕಾಗಿ ಐಸಿಎಂಆರ್ ಇತ್ತೀಚೆಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯಕರ ಜೀವನಶೈಲಿಯ ಜೊತೆಗೆ ಆಹಾರದ ಸಮತೋಲನ ಅತ್ಯಗತ್ಯ ಎಂದು ತಿಳಿಸಿದೆ. ಊಟಕ್ಕಿಂತ ಒಂದು ಗಂಟೆ ಮೊದಲು ಮತ್ತು ನಂತರ ಒಂದು ಗಂಟೆವರೆಗೆ ಕಾಫಿ, ಚಹಾ ಸೇವಿಸುವುದು ಹಾನಿಕಾರಕ ಎಂದು ಎಚ್ಚರಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಇದು ಬಹಿರಂಗವಾಗಿದೆ.
ಏಕೆಂದರೆ.., ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಮತ್ತು ಟ್ಯಾನಿನ್ ಗಳು ಇರುತ್ತವೆ. ಕೆಫೀನ್ ನರಮಂಡಲದ ಮೇಲೆ ಮತ್ತು ಆಹಾರದಲ್ಲಿನ ಕಬ್ಬಿಣಾಂಶದ ಮೇಲೆ ಟ್ಯಾನಿನ್ ತೀವ್ರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ. ಆಹಾರ ಸೇವನೆಯ ಸಮಯದಲ್ಲಿ ಟ್ಯಾನಿನ್ ಆಹಾರದಲ್ಲಿರುವ ಕಬ್ಬಿಣಾಂಶದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಿಮೋಗ್ಲೋಬಿನ್ ಎಂಬ ಪ್ರೋಟೀನ್ ತಯಾರಿಸಲು ಕಬ್ಬಿಣಾಂಶ ಅತ್ಯಗತ್ಯ. ಇದು ಇಡೀ ದೇಹಕ್ಕೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಪೇಯಗಳಲ್ಲಿರುವ ಟ್ಯಾನಿನ್ಗಳು ಕಬ್ಬಿಣಾಂಶ ಹೀರಿಕೊಳ್ಳುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಅಪಾಯವಿದೆ. ಅದಕ್ಕಾಗಿಯೇ ಊಟ ಮಾಡುವ ಮೊದಲು ಮತ್ತು ನಂತರ ಸ್ವಲ್ಪ ಸಮಯದವರೆಗೆ ಅವುಗಳನ್ನು ಸೇವಿಸದಿರುವುದು ಒಳ್ಳೆಯದು. ಏಕೆಂದರೆ ನಾವು ಸೇವಿಸುವ ಒಂದು ಕಪ್ ಕಾಫಿಯಲ್ಲಿ 80 ರಿಂದ 120 ಮಿಲಿಗ್ರಾಂ ಕೆಫೀನ್ ಇರುತ್ತದೆ. ಇನ್ಸ್ಟಂಟ್ ಕಾಫಿ 50-65mg ಅನ್ನು ಹೊಂದಿರುತ್ತದೆ. ಚಹಾವು 30-65mg ಕೆಫೀನ್ ಅನ್ನು ಹೊಂದಿರುತ್ತದೆ.