ಲಂಡನ್: ಪ್ರಾಣಿಗಳಿಂದ ಮಾನವರಿಗೆ ಹೆಚ್ಚಿನ ಸೋಂಕು ತಗಲುತ್ತದೆ ಎಂಬ ನಂಬಿಕೆ ಸಾಮಾನ್ಯ. ಆದರೆ ಹೊಸ ಅಧ್ಯಯನದ ಅನುಸಾರ ಮಾನವನೇ ವನ್ಯ ಮತ್ತು ಸಾಕು ಪ್ರಾಣಿಗಳಿಗೆ ವೈರಸ್ ಹರಡುತ್ತಾನೆ. ಇದು ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಮಾನವರು 'ಸೋಂಕಿನ ಸಿಂಕ್' ಆಗಿರುತ್ತಾರೆ ಎಂಬ ದೀರ್ಘಕಾಲದ ಸಿದ್ದಾಂತಕ್ಕೆ ಈ ಅಧ್ಯಯನ ಸವಾಲು ಹಾಕಿದೆ.
ಮಾನವರನ್ನು ಎಂದಿಗೂ ವೈರಸ್‌ನ ಮೂಲ ಎಂದು ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಮನುಷ್ಯರಿಂದ ಪ್ರಾಣಿಗಳಿಗೆ ಸೋಂಕು ಹರಡುವಿಕೆಯ ಅಂಶದ ಬಗ್ಗೆ ವಿಶೇಷ ಗಮನ ಹರಿಸಲಾಗಿಲ್ಲ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ವೈರಲ್ ಜೀನೋಮ್‌ಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.
ಪ್ರಾಣಿಗಳು ಮನುಷ್ಯರಿಂದ ಸೋಂಕು ಹೊಂದಿದರೆ, ಇದು ಕೇವಲ ಅಪಾಯ ಮಾತ್ರವೇ ಅಲ್ಲ, ಪ್ರಾಣಿ ಮತ್ತು ಅವುಗಳ ತಳಿಗಳ ಸಂರಕ್ಷಣೆಯೂ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾನವರ ಆಹಾರ ಭದ್ರತೆಯ ಹೊಸ ಬಿಕ್ಕಟ್ಟು ಸೃಷ್ಟಿಸುತ್ತದೆ. ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ಸೋಂಕು ಕಂಡುಬಂದರೆ, ಅವುಗಳು ಹರಡದಂತೆ ನಾಶ ಮಾಡಲಾಗುವುದು. ಇತ್ತೀಚಿಗೆ ಎಚ್1ಎನ್1 ಹಕ್ಕಿ ಜ್ವರ ಬಂದಾಗ ಪಕ್ಷಿಗಳ ಸಾಮೂಹಿಕ ಹರಣ ಮಾಡಲಾಯಿತು. ಈ ಮೂಲಕ ಇದು ಮಾನವರ ಆಹಾರದ ಪೂರೈಕೆ ಸರಪಳಿಯ ಮೇಲೂ ಪರಿಣಾಮ ಹೊಂದಿದೆ ಎಂದು ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನ ಡಾಕ್ಟರೇಟ್ ವಿದ್ಯಾರ್ಥಿ ಹಾಗೂ ಅಧ್ಯಯನದ ಪ್ರಮುಖ ಲೇಖಕ ಸೆಡ್ರಿಲ್ ಟಾನ್ ಹೇಳಿದ್ದಾರೆ.