ಉಪ್ಪಿಟ್ಟುಗಳಲ್ಲಿ ನಾನಾ ನಮೂನೆಗಳಿದ್ದರೂ ಶ್ಯಾವಿಗೆ ಉಪ್ಪಿಟ್ಟು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ನೆನಪಿಸಿಕೊಂಡರೆ ಸಾಕು, ಬಾಯಲ್ಲಿ ನೀರು ಬರುತ್ತದೆ. ಭಾಗಶಃ ಜನ ಶ್ಯಾವಿಗೆ ಉಪ್ಪಿಟ್ಟನ್ನು ಬೆಳಗಿನ ಉಪಾಹಾರವಾಗಿ ಸೇವಿಸುತ್ತಾರೆ. ಕಾರಣ ಅತ್ಯಂತ ಕಡಿಮೆ ಸಮಯದಲ್ಲಿ, ಸರಳವಾಗಿ, ಸುಲಭವಾಗಿ ಮಾಡಬಹುದಾದಂತ ಉಪಾಹಾರ ಇದಾಗಿದ್ದರಿಂದ ಬಹುತೇಕ ಗೃಹಿಣಿಯರು ಶ್ಯಾವಿಗೆ ಉಪ್ಪಿಟ್ಟಿನ ಮೊರೆ ಹೋಗುವುದು ಸಾಮಾನ್ಯ. ಮಕ್ಕಳಿಗೂ ಇದು ಇಷ್ಟದ ತಿಂಡಿ. ಆದರೆ, ಸಾಮಾನ್ಯವಾಗಿ ಶ್ಯಾವಿಗೆ ಉಪ್ಪಿಟ್ಟನ್ನು ಮಾಡುವಾಗ ಅದು ಮುದ್ದೆಯಾಗುವುದು ಅಥವಾ ಹೆಚ್ಚು ನೀರಾಗಿರುವುದನ್ನು ನೀವು ಎದುರಿಸಿರಬಹುದು. ಆದರೆ, ಈ ಶ್ಯಾವಿಗೆ ಉಪ್ಪಿಟ್ಟನ್ನು ಉದುರುದುರಾಗಿ ಮಾಡುವುದು ಅಥವಾ ಹೆಚ್ಚು ನೀರಾಗದಂತೆ ತಯಾರಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ..
ಎಲ್ಲರೂ ಒಂದೇ ಸರಳವಾಗಿ ಹಾಗೂ ಪರಿಪೂರ್ಣವಾಗಿ ಶ್ಯಾವಿಗೆ ಉಪ್ಪಿಟ್ಟು ಮಾಡುವುದು ಕಷ್ಟಸಾಧ್ಯ. ಆದರೆ, ಹೀಗೆ ಮಾಡಿದರೆ ಮೊದಲ ಸಲವೇ ರುಚಿ ರುಚಿಯಾಗಿ, ಉದುರುದುರಾಗಿ ಶ್ಯಾವಿಗೆ ಉಪ್ಪಿಟ್ಟನ್ನು ಮಾಡಬಹುದು. ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು. ನೀವು ಮಾಡಿದ ಶ್ಯಾವಿಗೆ ಉಪ್ಪಿಟ್ಟನ್ನು ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಮತ್ತೇಕೆ ತಡ? ಬಾಯಲ್ಲಿ ನೀರೂರಿಸುವ ಸೂಪರ್ ಟೇಸ್ಟಿ ಶ್ಯಾವಿಗೆ ಉಪ್ಪಿಟ್ಟು ಮಾಡುವ ವಿಧಾನ ಒಮ್ಮೆ ನೋಡಿ..!
ಬೇಕಾಗುವ ಪದಾರ್ಥಗಳು:
- ಶ್ಯಾವಿಗೆ - 1 ಗ್ಲಾಸು
- ಹಸಿರು ಬಟಾಣಿ - ಅರ್ಧ ಕಪ್
- ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
- ಉಪ್ಪು - ರುಚಿಗೆ ತಕ್ಕಷ್ಟು
- ಸಾಸಿವೆ - ಅರ್ಧ ಟೀ ಸ್ಪೂನ್
- ಜೀರಿಗೆ - ಅರ್ಧ ಚಮಚ
- ಕರಿಬೇವಿನ ಎಲೆಗಳು - ಒಂದೆರಡು
- ನೆಲಗಡಲೆ - 3 ಟೀ ಸ್ಪೂನ್
- ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
- ಮೆಣಸಿನಕಾಯಿ - 4
- ಕ್ಯಾಪ್ಸಿಕಂ ತುಂಡುಗಳು - 3 ಟೀ ಸ್ಪೂನ್
- ಬಟಾಣಿ - 2 ಟೀಸ್ಪೂನ್
- ಅರಿಶಿನ - ಒಂದು ಚಿಟಿಕೆ
ಶ್ಯಾವಿಗೆ ಉಪ್ಪಿಟ್ಟು ಮಾಡುವ ವಿಧಾನ:
- ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ನಂತರ ಶ್ಯಾವಿಗೆ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕೆಂಪಗೆ ಹುರಿಯಿರಿ.
- ಶ್ಯಾವಿಗೆಯನ್ನು ಈ ರೀತಿ ಹುರಿಯುವಾಗ, ಇನ್ನೊಂದು ಬದಿಯಲ್ಲಿ ಎರಡು ಲೋಟ ಬಿಸಿನೀರನ್ನು ತಯಾರಿಸಿ. ಈ ಬಿಸಿ ನೀರನ್ನು ಶ್ಯಾವಿಗೆಗೆ ಸುರಿಯಿರಿ ಮತ್ತು ಸ್ವಲ್ಪ ಬೇಯಿಸಿ.
- ಬೇಯಿಸಿದ ಶ್ಯಾವಿಗೆಯನ್ನು ಸ್ಟ್ರೈನರ್ (ಟೀ ಸೋಸುವ ವಸ್ತು) ಸಹಾಯದಿಂದ ಸೋಸಿಕೊಳ್ಳಿ.
- ಈಗ ಬಾಣಲೆಯನ್ನು ಒಲೆಯ ಮೇಲೆ ಇರಿಸಿ. ಬಿಸಿಯಾದ ನಂತರ ಎಣ್ಣೆ ಹಾಕಿ ಕಡಲೆಬೇಳೆಯನ್ನು ಹುರಿದು ಪಕ್ಕಕ್ಕೆ ಇಡಿ. ಸಾಸಿವೆ, ಜೀರಿಗೆ, ಈರುಳ್ಳಿ ಚೂರುಗಳು ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ.
- ಈರುಳ್ಳಿ ಸ್ವಲ್ಪ ಹುರಿದ ನಂತರ, ಬಟಾಣಿ, ಕ್ಯಾಪ್ಸಿಕಂ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತು ಮುಚ್ಚಿಡಿ.
- ಬಟಾಣಿ ಬೆಂದ ನಂತರ ರುಚಿಗೆ ತಕ್ಕಷ್ಟು ಅರಿಶಿನ ಮತ್ತು ಉಪ್ಪನ್ನು ಹಾಕಿ.
- ಜೊತೆಗೆ ಬೇಯಿಸಿದ ಶ್ಯಾವಿಗೆ ಮತ್ತು ಪಲ್ಯವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ನಂತರ ಸ್ಟೌ ಆಫ್ ಮಾಡುವ ಮೊದಲು ಸ್ವಲ್ಪ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ.
- ತುಂಬಾ ರುಚಿಯಾದ ಶ್ಯಾವಿಗೆ ಉಪ್ಪಿಟ್ಟು ಅದ್ಭುತವಾದ ಉದುರುದುರಾಗಿ ತಯಾರಿಸಲಾಗುತ್ತದೆ.
- ನಿಮಗೆ ಇಷ್ಟವಾದಲ್ಲಿ ನೀವು ಈ ಶೈಲಿಯಲ್ಲಿ ಶ್ಯಾವಿಗೆ ಉಪ್ಪಿಟ್ಟನ್ನು ಸಹ ತಯಾರಿಸಬಹುದು. ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ.