ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿ ಪಕ್ಷ ಮ್ಯಾಜಿಕ್ ನಂಬರ್ ದಾಟಿ ಗೆಲುವಿನತ್ತ ಸಾಗುತ್ತಿದೆ. ಬಿಜೆಪಿ ಅಂತಿಮವಾಗಿ ಗೆಲುವು ಸಾಧಿಸಿಯೇ ಬಿಟ್ಟರೆ ಬರೋಬ್ಬರಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಸಿಎಂ ಪಟ್ಟ ತನ್ನದಾಗಿಸಿಕೊಳ್ಳಲಿದೆ. ಅಧಿಕಾರದ ಗದ್ದುಗೆ ಏರಲಿದೆ. ಕೊನೆಯದ್ದಾಗಿ ಬಿಜೆಪಿ ದೆಹಲಿಯಲ್ಲಿ ಸರ್ಕಾರ ನಡೆಸಿದ್ದು 1998ರಲ್ಲಿ.
ಅದು 1998 ರ ಕಾಲ. ವಾಜಪೇಯಿ ಆಗ ದೇಶದ ಪ್ರಧಾನಿ ಆಗಿದ್ದರು. ಆಗ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿತ್ತು. ದೆಹಲಿ ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ ತಣಿಸಲು ಕೇಂದ್ರ ಮಂತ್ರಿಯಾಗಿದ್ದ, ಆಗಿನ ಮಿಂಚಿನ ಬಳ್ಳಿ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಈ ಮೂಲಕ 1998 ರಲ್ಲಿ ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ದುರದೃಷ್ಟವಶಾತ್ ಅವರು ನಡೆಸಿದ ಅಧಿಕಾರವಧಿ ಕೇವಲ 52 ದಿನಗಳು. ನಂತರ ಅವರು ಚುನಾವಣೆಯಲ್ಲಿ ಸೋತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ತಲೆಬಿಸಿ ಮಾಡಿ, ಅಧಿಕಾರ ಕಸಿದುಕೊಂಡಿದ್ದ ತರಕಾರಿ: ತರಕಾರಿ ಬೆಲೆ ಏರಿಕೆ ರಾಜ್ಯದ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿತ್ತು. 1998 ರಲ್ಲಿ ಏರುತ್ತಿದ್ದ ಈರುಳ್ಳಿ ಬೆಲೆಯು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಸರ್ಕಾರವನ್ನು ಉರುಳಿಸಿತ್ತು.
ಸಿಎಂ ಸುಷ್ಮಾ ಸ್ವರಾಜ್ ಉಳ್ಳಾಗಡ್ಡಿ ಬೆಲೆಯನ್ನು ಬೆಲೆಯನ್ನು ಕಡಿಮೆ ಮಾಡುವುದಕ್ಕೆ ಸಕಲ ರೀತಿಯಲ್ಲಿಯೂ ಪ್ರಯತ್ನ ಪಟ್ಟಿದ್ದರು. ಅದರಂತೆ ಸಾರ್ವಜನಿಕರಿಗೆ ಕೆಜಿಗೆ 5 ರೂಪಾಯಿಯಂತೆ ಈರುಳ್ಳಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ದಿಲ್ಲಿ ಜನ ಇವರ ಭರವಸೆಯನ್ನು ನಂಬಿರಲಿಲ್ಲ. ಬದಲಾಗಿ ಆಗ ಶೀಲಾ ದೀಕ್ಷಿತ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದರು.
ಸುಷ್ಮಾಗೆ ಟಕ್ಕರ್ ಕೊಟ್ಟಿದ್ದ ಶೀಲಾ ದೀಕ್ಷಿತ್: ಸುಷ್ಮಾ ಸ್ವರಾಜ್ ವಿರುದ್ಧ ಮತ್ತೊಬ್ಬ ಮಹಿಳಾ ನಾಯಕಿ ಶೀಲಾ ದೀಕ್ಷಿತ್ ಅವರು ಕಾಂಗ್ರೆಸ್ನಿಂದ ಚುನಾವಣೆಗೆ ಇಳಿಯುವ ಮೂಲಕ ಬಿಜೆಪಿಯಿಂದ ಅಧಿಕಾರ ಕಿತ್ತುಕೊಂಡಿತ್ತು. ಅದು ಎಷ್ಟರ ಮಟ್ಟಕ್ಕೆ ಅಂದರೆ ಬಿಜೆಪಿ ಕೇವಲ 15 ಸ್ಥಾನಗಳಿಗೆ ಕುಸಿತ ಕಂಡಿತ್ತು. ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಬರೊಬ್ಬರಿ 52 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಅಂದು ಸುಷ್ಮಾ ಸ್ವರಾಜ್ ಅವರಿಂದ ಅಧಿಕಾರ ಕಸಿದುಕೊಂಡಿದ್ದ ಶೀಲಾ ದೀಕ್ಷಿತ್ ಅವರು ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದರು.
ಈಗ ಅಂತಹದೇ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಅರವಿಂದ್ ಕೇಜ್ರಿವಾಲ್ ಅವರ ಉಚಿತ ಕೊಡುಗೆಗಳಿಗೆ, ಪ್ರೀ ಬೀಸ್ ನ ಅಸ್ತ್ರ ಪ್ರಯೋಗಿಸಿ ಮೋದಿ ಗ್ಯಾರಂಟಿ ಮೂಲಕವೇ ಅಧಿಕಾರ ಹಿಡಿಯುವತ್ತ ಬಿಜೆಪಿ ಮುನ್ನುಗ್ಗುತ್ತಿದೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಕಟ್ಟಿ ಅವರ ತಂತ್ರದಿಂದಲೇ ಕಟ್ಟಿ ಹಾಕಿತೇ ಬಿಜೆಪಿ: ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳನ್ನು 500 ರೂ.ಗೆ ನೀಡಿವುದು, ವೃದ್ಧಾಪ್ಯ ಪಿಂಚಣಿ 2500ಕ್ಕೆ ಹೆಚ್ಚಳ ಹಾಗೂ ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವುದಾಗಿ ಘೋಷಣೆ ಮಾಡಿತ್ತು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯ 'ಸಂಕಲ್ಪ ಪತ್ರ' ಬಿಡುಗಡೆ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದ್ರು.
ಇದನ್ನೂ ಓದಿ: ದೆಹಲಿ ಚುನಾವಣೆ ಫಲಿತಾಂಶ: ಆಪ್ ನಾಯಕರಿಗೆ ಸೋಲಿನ ಭೀತಿ: ನಿಜವಾಗುತ್ತಾ ಎಕ್ಸಿಟ್ ಪೋಲ್ ಸಮೀಕ್ಷಾ ರಿಸಲ್ಟ್