ಬೇಸಿಗೆಯಲ್ಲಿ ಬಿಸಿಲು, ಧಗೆ, ಸೆಕೆಯು ಜನರಲ್ಲಿ ಎಲ್ಲಿಲ್ಲದ ನಿತ್ರಾಣವನ್ನುಂಟು ಮಾಡುತ್ತದೆ. ಆದ್ದರಿಂದ ಹೆಚ್ಚಿನ ರಸಭರಿತ ಮತ್ತು ರುಚಿಕರ ಹಣ್ಣುಗಳ ಮೊರೆ ಹೋಗುತ್ತಾರೆ. ಅದರಲ್ಲೂ, ಬಹುಪಾಲು ಜನರು ಮೊದಲು ಹುಡುಕುವ ಹಣ್ಣೆಂದರೆ, ಕಲ್ಲಂಗಡಿ. ಮನೆಯಿಂದ ಬಿಸಿಲಿಗೆ ಹೊರ ಬಂದವರು ಕಲ್ಲಂಗಡಿ ಹಣ್ಣನ್ನು ಖಂಡಿತವಾಗಿ ತಿನ್ನುತ್ತಾರೆ. ಆದರೆ, ಮಾರುಕಟ್ಟೆಯಲ್ಲಿರುವ ಕೆಲವರು ದುರಾಸೆಗೆ ಒಳಗಾಗಿ ಕಲ್ಲಂಗಡಿ ಹಣ್ಣುಗಳು ಬೇಗ ಹಣ್ಣಾಗುವಂತೆ ಮಾಡಲು ಚುಚ್ಚುಮದ್ದು ನೀಡುತ್ತಾರೆ. ಹೀಗೆ ಇಂಜೆಕ್ಷನ್ ನೀಡಿದ ಕಲ್ಲಂಗಡಿ ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹವು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬಹುದು. ಆದರೆ, ದುರಾಸೆಯಿಂದ ಇಂಜೆಕ್ಷನ್ ಕೊಟ್ಟು ಕಲ್ಲಂಗಡಿಯನ್ನು ಕೆಂಪಗಾಗಿಸುತ್ತಾರೆ. ಇಂತಹ ಹಣ್ಣು ಸೇವನೆಯಿಂದ ಆರೋಗ್ಯದ ಮೇಲೆ ಸಮಸ್ಯೆ ಬೀರುವುದು ಖಂಡಿತ ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಲ್ಲಂಗಡಿ ಖರೀದಿಸುವಾಗ ಹಣ್ಣು ಶುದ್ಧವಾಗಿದೆಯಾ ಎಂದು ಗುರುತಿಸಲು ಏನು ಮಾಡಬೇಕು?
- ಕಲ್ಲಂಗಡಿ ಸ್ವಲ್ಪ ಬಿಳಿಯಾಗಿ, ಅಲ್ಲಲ್ಲಿ ಹಳದಿ ಚುಕ್ಕೆಗಳಿದ್ದರೆ, ಅದಕ್ಕೆ ಇಂಜೆಕ್ಷನ್ ಮಾಡಿರುವ ಸಾಧ್ಯತೆ ಇರುತ್ತದೆ.
- ಕಲ್ಲಂಗಡಿ ತ್ವರಿತವಾಗಿ ಹಣ್ಣಾಗಲು ಕಾರ್ಬೈಡ್ ಎಂಬ ರಾಸಾಯನಿಕ ಸಿಂಪಡಿಸಲಾಗುತ್ತದೆ. ಕಲ್ಲಂಗಡಿ ಮೇಲೆ ಹಳದಿ ಬಣ್ಣದಲ್ಲಿದ್ದರೆ, ಅದನ್ನು ಉಪ್ಪು ನೀರಿನಿಂದ ಚೆನ್ನಾಗಿ ತೊಳೆದು ತಿನ್ನಲು ಸೂಚಿಸಲಾಗುತ್ತದೆ.
- ನೀವು ಖರೀದಿಸುವ ಕಲ್ಲಂಗಡಿ ಸಾಮಾನ್ಯಕ್ಕಿಂತ ಹೆಚ್ಚು ಕೆಂಪಾಗಿದ್ದರೂ, ಅದಕ್ಕೆ ಇಂಜೆಕ್ಷನ್ ಮಾಡಲಾಗಿದೆ ಎಂದು ಗುರುತಿಸಬಹುದು.
- ಅಲ್ಲದೇ, ಈ ಚುಚ್ಚುಮದ್ದಿನ ಕಲ್ಲಂಗಡಿ ತಿಂದರೆ, ನಾಲಿಗೆ ತುಂಬಾ ಕೆಂಪಾಗುತ್ತದೆ ಎನ್ನುತ್ತಾರೆ ತಜ್ಞರು.
- ಕಲ್ಲಂಗಡಿ ಖರೀದಿಸಿದಾಗ, ಹಣ್ಣನ್ನು ಚೆನ್ನಾಗಿ ನೋಡಿ. ಅವುಗಳ ಮೇಲೆ ಎಲ್ಲಿಯಾದರೂ ರಂಧ್ರಗಳಿದ್ದರೆ ಅವುಗಳನ್ನು ಖರೀದಿಸಬೇಡಿ. ರಂಧ್ರವಿರುವ ಕಲ್ಲಂಗಡಿಗಳಿಗೆ ಇಂಜೆಕ್ಷನ್ ಮಾಡಿರಬಹುದು.
- ಇಂಜೆಕ್ಷನ್ ಮಾಡಿದ ಕಲ್ಲಂಗಡಿ ಕತ್ತರಿಸಿದಾಗ, ಹಣ್ಣಿನಲ್ಲಿ ಹೆಚ್ಚು ಬಿರುಕುಗಳು ಉಂಟಾಗುತ್ತವೆ.