Walking Rule: ಇತ್ತೀಚಿನ ದಿನಗಳಲ್ಲಿ ಬಹುತೇಕರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಫಿಟ್ ಆಗಿರಲು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದಾರೆ. ಈ ರೀತಿ ಫಿಟ್ ಆಗಿರುವುದರಿಂದ ಆರೋಗ್ಯ, ಆತ್ಮವಿಶ್ವಾಸ ಹಾಗೂ ಸೌಂದರ್ಯವೂ ವರ್ಧಿಸುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈ ನಿಟ್ಟಿನಲ್ಲಿ '6-6-6' ನಿಯಮ ತುಂಬಾ ಸಹಾಯಕ.
'6-6-6' ನಿಯಮವೇನು?: ನೀವು ಬೆಳಿಗ್ಗೆ 6 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ವಾಕಿಂಗ್ ಮಾಡಬೇಕು. ಅದಕ್ಕೂ ಮೊದಲು ಆರು ನಿಮಿಷಗಳ ಕಾಲ ವಾರ್ಮಪ್ ಮಾಡಿ ಬೆಚ್ಚಗಾಗಬೇಕು. ಒಟ್ಟು 60 ನಿಮಿಷಗಳ ವಾಕಿಂಗ್ ಅನ್ನು ನೀವು ನಿಯಮಿತವಾಗಿ ಮಾಡಲು ಸಾಧ್ಯವಾದರೆ, ಅದ್ಭುತ ಫಲಿತಾಂಶಗಳು ಸಿಗುತ್ತವೆ. ಪರಿಣಾಮವಾಗಿ, ನೀವು ಬಯಸಿದ ಫಿಟ್ನೆಸ್ ಸಾಧಿಸುವುದಲ್ಲದೇ, ನಿಮ್ಮ ತ್ವಚೆಯ ಸೌಂದರ್ಯವನ್ನೂ ಹೆಚ್ಚಿಸಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಹೀಗೆ ಮಾಡುವುದರಿಂದ ವೈದ್ಯರನ್ನು ಆಗಾಗ ಭೇಟಿಯಾಗುವ ಅಗತ್ಯವೂ ಇರಲ್ಲ. ಬೆಳಗಿನ ನಡಿಗೆ ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸಲು ಹಾಗೂ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲೂ ಕೂಡ ಸಹಕಾರಿ ಎಂದು ತಜ್ಞರು ಹೇಳುತ್ತಾರೆ.
ಸಂಶೋಧನೆ ಹೇಳುವುದೇನು?: ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯ ಸದೃಢವಾಗುತ್ತದೆ. ಸಂಜೆಯ ನಡಿಗೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಸಂಜೆಯ ನಡಿಗೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ನಿದ್ರಾಹೀನತೆ ನಿವಾರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳು ನಿಯಂತ್ರಣದಲ್ಲಿರುತ್ತವೆ. ಇದರ ಪರಿಣಾಮವಾಗಿ ಹೃದಯ ಸಮಸ್ಯೆಗಳ ಅಪಾಯ ತುಂಬಾ ಕಡಿಮೆಯಾಗುತ್ತದೆ. 2017ರಲ್ಲಿ ಜರ್ನಲ್ ಆಫ್ ಸ್ಪೋರ್ಟ್ಸ್ ಸೈನ್ಸ್ ಆ್ಯಂಡ್ ಮೆಡಿಸಿನ್‌ನಲ್ಲಿ ಪ್ರಕಟವಾದ 'ವಾಕಿಂಗ್ ಮತ್ತು ಹೃದಯರಕ್ತನಾಳದ ಆರೋಗ್ಯ: ಒಂದು ವ್ಯವಸ್ಥಿತ ವಿಮರ್ಶೆ' ಎಂಬ ಅಧ್ಯಯನದಲ್ಲಿ ಈ ವಿಷಯವು ತಿಳಿದುಬಂದಿದೆ.
60 ನಿಮಿಷಗಳ ವಾಕಿಂಗ್: ಪ್ರತಿದಿನ 60 ನಿಮಿಷಗಳ ಕಾಲ ವಾಕಿಂಗ್ ಮಾಡುವುದರಿಂದ ಅಧಿಕ ತೂಕದಿಂದ ದೂರವಿರಲು ಸಹಾಯವಾಗುತ್ತದೆ. ನಡೆಯುವ ಮೊದಲು ಆರು ನಿಮಿಷಗಳ ವಾರ್ಮ್ಅಪ್ ಮಾಡುವ ಅಭ್ಯಾಸವು ಹೃದಯ ಬಡಿತ ಹಾಗೂ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಸ್ನಾಯುಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇವೆಲ್ಲವೂ ದೇಹವನ್ನು ನಡೆಯಲು ಸಿದ್ಧಪಡಿಸುತ್ತದೆ. ಇದರಿಂದ ವೇಗವಾಗಿ ವಾಕಿಂಗ್ ಮಾಡಲು ಪ್ರೋತ್ಸಾಹ ಲಭಿಸುತ್ತದೆ. ವಾಕಿಂಗ್ ಮಾಡಿದ ನಂತರ ವಿಶ್ರಾಂತಿ ಪಡೆಯುವುದರಿಂದ ದೇಹದ ಉಷ್ಣತೆ ನಿಯಂತ್ರಿಸಲು ಸಹಾಯವಾಗುತ್ತದೆ. ಇದು ಸ್ನಾಯುಗಳಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಇದು ಸ್ನಾಯುಗಳ ಆಯಾಸ ಕಡಿಮೆ ಮಾಡುತ್ತದೆ. ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಮತ್ತೇಕೆ ತಡ? ಇಂದಿನಿಂದ ವಾಕಿಂಗ್ನ ಹೊಸ ನಿಯಮ ಟ್ರೈ ಮಾಡಿ ನೋಡಿ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ ವೀಕ್ಷಿಸಬಹುದು: https://pmc.ncbi.nlm.nih.gov/articles/PMC2782938/
ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಶುಗರ್ ನಿಯಂತ್ರಿಸಲು ಪ್ರತಿದಿನ ಎಷ್ಟು ಹೊತ್ತು ವಾಕಿಂಗ್ ಮಾಡಬೇಕು ಗೊತ್ತೇ?: ತಜ್ಞರು ಹೇಳೋದು ಹೀಗೆ