ನವದೆಹಲಿ:ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಇಂದು ಅನೇಕರು ಮನೆಯಲ್ಲೇ ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿ ಡಿಟಾಕ್ಸಿಫೈಯರ್ಸ್ (ಕೆಟ್ಟ ಅಂಶಗಳನ್ನು ತೊಡೆದು ಹಾಕುವುದು)ಗೆ ಮುಂದಾಗುತ್ತಾರೆ. ಆದರೆ, ಈ ರೀತಿಯ ಕ್ರಮಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಎಚ್ಚರವಹಿಸಬೇಕು ಎಂದು ಕೇರಳ ರಾಜ್ಯ ಐಎಂಎ ಸಂಶೋಧನಾ ಘಟಕದ ಮುಖ್ಯಸ್ಥ ಡಾ.ರಾಜೀವ್ ಜಯದೇವನ್ ತಿಳಿಸಿದ್ದಾರೆ.
ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‌ನ 32ನೇ ವಾರ್ಷಿಕ ವೈಜ್ಞಾನಿಕ ಸಭೆಯಲ್ಲಿ ಮಾತನಾಡಿದ ಅವರು, ಯಕೃತ್ ರಕ್ಷಣೆಗೆ ಯಾವುದೇ ಶಾರ್ಟ್ಕಟ್ ಇಲ್ಲ. ಯಕೃತ್ ದೇಹದಲ್ಲಿ ಉತ್ಪನ್ನವಾಗುವ ತ್ಯಾಜ್ಯ ಹೊರಹಾಕಲು ಸ್ವಯಂ ಸಾಮರ್ಥ್ಯ ಹೊಂದಿದೆ ಎಂದರು.
ಅನೇಕರು ಇಂದು ಆಧುನಿಕ ಸಮಯದಲ್ಲಿ ಡಿಟಾಕ್ಸ್ ಎಂಬ ಪದ ಬಳಸುತ್ತಿದ್ದಾರೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಶುದ್ಧಗೊಳಿಸುವ ಪ್ರಕ್ರಿಯೆಗಳಿಗೆ ಡಿಟಾಕ್ಸ್ ಎಂಬ ಪದವನ್ನು ಈ ಹಿಂದೆ ಬಳಸುತ್ತಿದ್ದರು. ಆದರೆ, ಈ ರೀತಿಯ ಶುದ್ಧತೆಯನ್ನು ಶಾರ್ಟ್ಕಟ್ಗಳ ಮೂಲಕ ಯಕೃತ್ನಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಯಕೃತ್ ಸ್ವಯಂ ಶುದ್ಧೀಕರಣ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಯಕೃತ್ ಆರೋಗ್ಯದಲ್ಲಿ ತೆಗೆದುಕೊಳ್ಳಬಹುದಾದ ಪ್ರಮುಖ ಮಾರ್ಗವೆಂದರೆ ಆಲ್ಕೋಹಾಲ್ ಸೇರಿದಂತೆ ಅದಕ್ಕೆ ಹಾನಿಯಾಗುವಂತಹ ಪದಾರ್ಥಗಳಿಂದ ದೂರ ಇರುವುದು ಎಂದರು.
ಇದೇ ವೇಳೆ, ಸಾಮಾಜಿಕ ಜಾಲತಾಣಗಳ ಸ್ವಯಂ ಘೋಷಿತ ಆರೋಗ್ಯ ತಜ್ಞರ ಕುರಿತು ಎಚ್ಚರಿಸಿದರು. ವಾಣಿಜ್ಯ ಹಿತಾಸಕ್ತಿಯೊಂದಿಗೆ ಜ್ಞಾನದ ಕೊರತೆ ಅವರಲ್ಲಿದೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.