India vs England 4th T20: ಭಾರತ (India) ಮತ್ತು ಇಂಗ್ಲೆಂಡ್ (England) ನಡುವೆ ನಾಲ್ಕನೇ ಟಿ20 (T20) ಪಂದ್ಯ ಶುಕ್ರವಾರ (ನಾಳೆ) ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿವೆ. ಇದರಲ್ಲಿ ಭಾರತ 2-1 ಅಂತರದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಇದೀಗ ಉಭಯ ತಂಡಗಳು ನಾಲ್ಕನೇ ಪಂದ್ಯಕ್ಕಾಗಿ ಸಕಲ ಸಿದ್ಧತೆ ನಡೆಸಿವೆ. ನಾಳೆ ನಡೆಯಲಿರುವ ನಾಲ್ಕನೇ ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಮಂಗಳವಾರ ನಡೆದಿದ್ದ 3ನೇ ಪಂದ್ಯದಲ್ಲಿ ಪುಟಿದೆದ್ದ ಆಂಗ್ಲರ ಪಡೆ ಭಾರತದ ವಿರುದ್ಧ 26 ರನ್ಗಳ ಗೆಲುವು ಸಾಧಿಸಿತ್ತು. ಇದೀಗ ನಾಲ್ಕನೇ ಪಂದ್ಯದಲ್ಲೂ ಗೆದ್ದು ಸರಣಿ ಜೀವಂತವಾಗಿರಿಸಿಕೊಳ್ಳಲು ಯೋಜನೆ ರೂಪಿಸಿದೆ.
ಮತ್ತೊಂದೆಡೆ ಭಾರತ ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಹಿನ್ನೆಲೆ ಉಭಯ ತಂಡಗಳ ನಡುವಿನ ನಾಲ್ಕನೇ ಪಂದ್ಯದಲ್ಲಿ ಭಾರೀ ಪೈಪೋಟಿ ಏರ್ಪಡಲಿದೆ.
ಆದರೆ, ನಾಲ್ಕನೇ ಪಂದ್ಯ ಆರಂಭಕ್ಕೂ ಟೀಂ ಇಂಡಿಯಾಗೆ ಆತಂಕ ಎದುರಾಗಿದೆ. ಇದಕ್ಕೆ ಪುಣೆ ಮೈದಾನದಲ್ಲಿನ ಅಂಕಿಅಂಶಗಳೆ ಕಾರಣವಾಗಿದೆ. ಹೌದು, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಟೀಂ ಇಂಡಿಯಾ ಈ ವರೆಗೆ 4 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡರಲ್ಲಿ ಗೆಲುವು ಎರಡರಲ್ಲಿ ಸೋಲನುಭವಿಸಿದೆ.
2023ರಲ್ಲಿ ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದ ಭಾರತ 16 ರನ್ಗಳಿಂದ ಸೋಲನ್ನು ಅನುಭವಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ 3ನೇ ಪಂದ್ಯದಲ್ಲಾದ ತಪ್ಪನ್ನು ತಿದ್ದಿಕೊಂಡರೇ ಫಲಿತಾಂಶ ಭಾರತದಾಗಲಿದೆ. ಒಂದು ವೇಳೆ ಹಳೆ ತಪ್ಪು ಪುನರಾವರ್ತನೆ ಆದರೇ ಸೋಲು ಕಟ್ಟಿಟ್ಟ ಬುತ್ತಿ.
ಈ ಮೈದಾನದಲ್ಲಿ 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ಟಿ20ಯಲ್ಲಿ ಮುಖಾಮುಖಿಯಾಗುತ್ತಿವೆ. ಈ ಹಿಂದೆ ನಡೆದಿದ್ದ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಆಂಗ್ಲರ ವಿರುದ್ದ ಗೆಲುವು ಸಾಧಿಸಿತ್ತು.
ಹೆಡ್ ಟು ಹೆಡ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ವರೆಗೂ ಒಟ್ಟು 27 ಟಿ20 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 15 ಬಾರಿ ಗೆಲುವು ಸಾಧಿಸಿ ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿದೆ. ಉಳಿದಂತೆ ಇಂಗ್ಲೆಂಡ್ 12 ಪಂದ್ಯಗಳನ್ನು ಗೆದ್ದುಕೊಂಡಿದೆ.
ಸಂಭಾವ್ಯ ತಂಡಗಳು-ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೇಟ್ ಕೀಪರ್), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ರಿಂಕು ಸಿಂಗ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಫಿಲಿಪ್ ಸಾಲ್ಟ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸ್, ಜೇಮೀ ಸ್ಮಿತ್, ಜೇಮೀ ಓವರ್ಟನ್, ಆದಿಲ್ ರಶೀದ್, ಲಿಯಾಮ್ ಲಿವಿಂಗ್‌ಸ್ಟೋನ್, ಸಾಕಿಬ್ ಮಹಮೂದ್, ರೆಹಾನ್ ಅಹ್ಮದ್, ಮಾರ್ಕ್ ವುಡ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್.
ಇದನ್ನೂ ಓದಿ: ಶಾಕಿಂಗ್ ನ್ಯೂಸ್: 4 ವರ್ಷಗಳ ಬಳಿಕ ವಿರಾಟ್ ಕೊಹ್ಲಿಗೆ ಅನಿರೀಕ್ಷಿತ ಆಘಾತ!