ಬಹಳ ಜನರಿಗೆ ಬೆನ್ನು ಬಿಡದೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಲೇ ಇರುತ್ತದೆ. ಗ್ಯಾಸ್ಟ್ರಿಕ್ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದರೂ ಆ ನೋವು ಅನುಭವಿಸಿದಾಗಲೇ ಬೆಟ್ಟದಷ್ಟು ದೊಡ್ಡದಿದೆ ಎಂದೆನ್ನಿಸಿ ಬಿಡುತ್ತದೆ. ಯಾವು ನೋವು ಆಗಬಹುದು ಆದರೆ ಗ್ಯಾಸ್ಟ್ರಿಕ್ ಮಾತ್ರ ಬೇಡಪ್ಪಾ ಅನ್ನುವವರು ನಮ್ಮಲ್ಲಿದ್ದಾರೆ. ಅವರಿಗಾಗಿ ಗ್ಯಾಸ್ಟ್ರಿಕ್ ಹೋಗಲಾಡಿಸಲು ಸುಲಭವಾಗಿ ಮನೆಯಲ್ಲೇ ಕಂಡುಕೊಳ್ಳಬಹುದಾದ ಪರಿಹಾರ ಇಲ್ಲಿದೆ ನೋಡಿ.
ಈ ಗ್ಯಾಸ್ಟ್ರಿಕ್ಗೆ ಮುಖ್ಯವಾಗಿ ನಿಗದಿತ ಸಮಯಕ್ಕೆ ಆಹಾರ ಸೇವಿಸದೇ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಂಟಾಗುವ ಏರುಪೇರು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗೆ ಮೂಲ ಕಾರಣ. ವಯಸ್ಸಿನ ಭೇದವಿಲ್ಲದೆ ಈ ಗ್ಯಾಸ್ ಸಮಸ್ಯೆ ಕಾಡುತ್ತದೆ. ಆ ವೇಳೆ ಗ್ಯಾಸ್ಟ್ರಿಕ್ ನಿವಾರಿಸಲು ಅನೇಕ ಜನರು ಹಲವಾರು ಪ್ರಯತ್ನಗಳನ್ನು ಮಾಡಿಯೂ ಸರಿಯಾಗದೇ ಒದ್ದಾಡುತ್ತಾರೆ. ಇನ್ನೂ ಕೆಲವರು ಸರಿಯಾಗಿ ತಿಂದರೂ ಹೊಟ್ಟೆಯಲ್ಲಿ ಗ್ಯಾಸ್ ತುಂಬಲು ಆರಂಭವಾಗುತ್ತದೆ. ಇದೇ ಗ್ಯಾಸ್ಟ್ರಿಕ್ ದೀರ್ಘಾವಧಿಯ ತೊಂದರೆಯಾಗಬಹುದು. ಔಷಧಿ ಅಥವಾ ಇತರ ವಿಧಾನಗಳಿಂದ ಇದನ್ನು ನಿವಾರಿಸಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಮೊದಲು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅದಾಗ್ಯೂ ನಿಮಗೆ ಅಗತ್ಯ ಬಿದ್ದರೆ ಔಷಧಗಳನ್ನು ಉಪಯೋಗಿಸಿ ಹೊಟ್ಟೆಯ ಗ್ಯಾಸ್ ಸಮಸ್ಯೆ ಬರದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು.
ಬದಲಾವಣೆ ಮುಖ್ಯ:ತಜ್ಞರ ಪ್ರಕಾರ ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಉಲ್ಬಣಗೊಳಿಸುವ ಧೂಮಪಾನ, ಕಾಫಿ ಕುಡಿತ ಮತ್ತು ಚಾಕೊಲೇಟ್‌ಗಳನ್ನು ಅತಿಯಾಗಿ ತಿನ್ನುವುದನ್ನು ತಡೆಯಬೇಕು. ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಫೈಬರ್ ಹೊಂದಿರುವ ಆಹಾರವನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ನಾರಿನಂಶ ಹೆಚ್ಚಿರುವ ಹಸಿರು ತರಕಾರಿ, ಹೂಕೋಸು, ಕೋಸುಗಡ್ಡೆ, ಸೌತೆಕಾಯಿಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದು ಎನ್ನುತ್ತಾರೆ.
ಇವುಗಳನ್ನು ಮಾಡಲೇಬೇಡಿ: ನಮ್ಮಲ್ಲಿ ಹೆಚ್ಚಿನವರು ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಇದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ತಿಂದ ತಕ್ಷಣ ಮಲಗಿದರೆ ಅರೆಬೆಂದ ಆಹಾರ ಬಾಯಿಗೆ ಬರುವ ಸಾಧ್ಯತೆ ಇದೆ. ಚಿಕನ್, ಮೀನಿನಂತಹ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಗ್ಯಾಸ್ಟ್ರಿಕ್ ತಡೆಯಲು ಈ ಸಲಹೆಗಳನ್ನು ಪಾಲಿಸಿ:
ಪುದೀನ ಚಹಾ: ಪುದೀನಾ ಎಲೆಗಳನ್ನು ಜಗಿಯುವುದು ಅಥವಾ ಪುದೀನಾ ಟೀ ಕುಡಿಯುವುದರಿಂದ ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಶೀಘ್ರ ಪರಿಹಾರ ಸಿಗುತ್ತದೆ.