ಅಜ್ಮೀರ್( ರಾಜಸ್ಥಾನ): 13 ತಿಂಗಳ ಹಸುಳೆಯ ಹೊಟ್ಟೆಯಲ್ಲಿದ್ದ 14 ವಾರದ ಭ್ರೂಣವನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಇಲ್ಲಿನ ಜೆಎಲ್ಎನ್ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆದ ಸಂಕೀರ್ಣ ಶಸ್ತ್ರ ಚಿಕಿತ್ಸೆಯಲ್ಲಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರ ತೆಗೆಯಲಾಗಿದೆ. 450 ಗ್ರಾಂ ತೂಕದ ಭ್ರೂಣವನ್ನು ಹೊರತೆಗೆದ ಬಳಿಕ ಮಗು ಸಂಪೂರ್ಣ ಆರೋಗ್ಯವಾಗಿದೆ. ಮಗುವಿನ ಹೊಟ್ಟೆಯಲ್ಲಿಯೇ ಭ್ರೂಣವಿರುವಂತಹ ಅಪರೂಪದ ಪ್ರಕರಣಗಳು ಜಗತ್ತಿನಲ್ಲಿ ವರದಿ ಆಗುತ್ತಿರುತ್ತವೆ. ಈ ಪ್ರಕರಣಗಳನ್ನು ವೈದ್ಯಕೀಯ ಭಾಷೆಯಲ್ಲಿ ಭ್ರೂಣದಲ್ಲಿನ ಭ್ರೂಣ ಎಂದು ಕರೆಯಲಾಗುವುದು.
ಈ ಪ್ರಕರಣದ ಕುರಿತು ಮಾತನಾಡಿರುವ ಮಕ್ಕಳ ಸರ್ಜನ್ ಆಗಿರುವ ಡಾ ಗರಿಮ ಆರೋರಾ, ಅಜ್ಮೀರ್ನ ನಿವಾಸಿ ತಾಯಿ ಹೊಟ್ಟೆಯಲ್ಲಿದ್ದ ಭ್ರೂಣದ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಸೋನೋಗ್ರಾಫಿ ಮೂಲಕ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಗೆ ಹೆರಿಗೆಯಾದ ಬಳಿಕ ಬರುವಂತೆ ಸೂಚಿಸಲಾಗಿತ್ತು. ಒಂದೂವರೆ ತಿಂಗಳ ನವಜಾತ ಶಿಶುವಿಗೆ ಸೋನೋಗ್ರಾಫಿ ಮತ್ತು ಸಿಟಿ ಪರೀಕ್ಷೆಯನ್ನು ನಡೆಸಲಾಯಿತು. ನವಜಾತ ಶಿಶುವಿನ ಹೊಟ್ಟೆಯಲ್ಲಿನ ಗಡ್ಡೆ ಇರುವುದು ಕಂಡಿದ್ದು, ಇದು ಭ್ರೂಣ ಎಂಬುದು ಖಚಿತವಾಯಿತು
ಇದನ್ನು ಪರಾವಲಂಬಿ ಅವಳಿ ಎನ್ನಲಾಗುತ್ತದೆ. ಅವಳಿ ಭ್ರೂಣದಲ್ಲಿ ಒಂದಕ್ಕೆ ರಕ್ತದ ಪೂರೈಕೆ ಕಡಿಮೆಯಾದಾಗ ಅದು ಬೆಳವಣಿಗೆ ನಿಲ್ಲಿಸುತ್ತದೆ. ಈ ಬೆಳವಣಿಗೆ ನಿಲ್ಲಿಸಿದ ಭ್ರೂಣದಲ್ಲಿ ಬೆನ್ನು ಹುರಿ ಕಾಣಬಹುದಾಗಿದೆ. ಇದು ಸಾಮಾನ್ಯ ಭ್ರೂಣದಂತೆ ಕಂಡಿದೆ. ಇದು 12-14 ವಾರದ ಭ್ರೂಣವಾಗಿದ್ದು, 450 ಗ್ರಾಂ ತೂಕವನ್ನು ಹೊಂದಿದೆ. ಈ ರೀತಿ ಪ್ರಕರಣಗಳು ಜಗತ್ತಿನಲ್ಲಿ 200ರ ಸಂಖ್ಯೆಯಲ್ಲಿರಬಹುದಷ್ಟೇ.