These Foods Can Be Cause for Cancer: ನಮ್ಮಲ್ಲಿ ಅನೇಕರು ಬೆಳಗ್ಗೆ ಪೂರಿ, ವಡಾ, ದೋಸೆಯಂತಹ ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತಾರೆ. ಅಲ್ಲದೆ, ಈ ಪದಾರ್ಥಗಳನ್ನು ಸಂಜೆ ವೇಳೆಯಲ್ಲೂ ತಿಂಡಿಗಳ ರೂಪದಲ್ಲಿ ತೆಗೆದುಕೊಳ್ಳುತ್ತಾರೆ. ನೀವು ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತಿದ್ದರೆ ತಜ್ಞರು ತಕ್ಷಣವೇ ನಿಮ್ಮನ್ನು ಎಚ್ಚರಿಸಲು ಬಯಸುತ್ತಾರೆ. ಏಕೆಂದರೆ, ಒಂದಕ್ಕಿಂತ ಹೆಚ್ಚು ಬಾರಿ ಕರಿದ ಎಣ್ಣೆಯಲ್ಲಿ ಸಿದ್ಧಪಡಿಸಿದ ಆಹಾರ ಸೇವಿಸಿದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಗಳು ಕೂಡ ಇದನ್ನೇ ಸ್ಪಷ್ಟಪಡಿಸುತ್ತದೆ. ಈ ಕುರಿತು ಸಂಪೂರ್ಣ ವಿವರಗಳನ್ನು ಇದೀಗ ತಿಳಿಯೋಣ.
ಇಂದಿನ ಆಧುನಿಕ ಜಂಜಾಟದ ಬದುಕಿನಲ್ಲಿ ಸಮಯದ ಅಭಾವದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಅನೇಕರು ಹೊಟ್ಟೆ ತುಂಬಿಸಿಕೊಳ್ಳಲು ಮನೆಯಿಂದ ಹೊರಗಿನ ಆಹಾರಗಳನ್ನು ಸೇವಿಸುತ್ತಾರೆ. ಅದರಲ್ಲಿ ಹೆಚ್ಚಿನ ಜನರು ಎಣ್ಣೆ ಪದಾರ್ಥಗಳನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ, ಇಂತಹವರೆಲ್ಲರೂ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ.. ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಆಹಾರ ಕಲಬೆರಕೆ ಜೊತೆಗೆ ನಾಲ್ಕೈದು ಬಾರಿ ಅಡುಗೆ ಎಣ್ಣೆ ಬಳಕೆ, ಶುಚಿತ್ವ ಕಾಪಾಡದಿರುವುದು, ಅಗ್ಗದ ವಸ್ತುಗಳ ಬಳಕೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ. ಹಾಗಾಗಿ ಆದಷ್ಟು ಎಣ್ಣೆಯುಕ್ತ ಆಹಾರ ಮತ್ತು ಹೊರಗಿನ ಆಹಾರ ಸೇವನೆಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
FSSAI ನಿಯಮಗಳು ಏನು ಹೇಳುತ್ತವೆ?: ಎಣ್ಣೆಯನ್ನು ಹೆಚ್ಚಾಗಿ ಕುದಿಸುವುದು ಒಟ್ಟು ಪೋಲಾರ್ ಕಾಂಪೌಂಡ್ಸ್ (TPC) ಅನ್ನು ಸ್ವತಂತ್ರ ರಾಡಿಕಲ್ಗಳಾಗಿ ಪರಿವರ್ತಿಸುತ್ತದೆ. FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ನಿಯಮಗಳು ಧ್ರುವೀಯ ಸಂಯುಕ್ತಗಳು ಸಾಮಾನ್ಯ ಅಡುಗೆ ಎಣ್ಣೆಯ 25 ಪ್ರತಿಶತವನ್ನು ಮೀರಿದರೆ, ಅದನ್ನು ಬದಲಾಯಿಸಬೇಕು ಎಂದು ಹೇಳುತ್ತದೆ. ಹಾನಿಕಾರಕ ಆಹಾರ ಬಣ್ಣಗಳು, ರುಚಿಯ ಉಪ್ಪು ಮತ್ತು ಸೋಯಾ ಸಾಸ್ ಅನ್ನು ಬಹುತೇಕ ಎಲ್ಲಾ ಹೋಟೆಲ್‌ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಹಾಗಾಗಿ ರಸ್ತೆ ಬದಿಯ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ನಿರ್ಲಕ್ಷಿಸಿ ಈ ಆಹಾರ ತಿಂದರೆ ನಿಮ್ಮ ಆರೋಗ್ಯಕ್ಕೆ ಕುತ್ತು!:
FSSAI ನಿಯಮಗಳು ಮಾತ್ರವಲ್ಲದೆ ವೈದ್ಯರು ಕೂಡ ಹೊರಗಿನ ಆಹಾರವು ಉತ್ತಮವಲ್ಲ ಎಂದು ಹೇಳುತ್ತಾರೆ. ಕಲಬೆರಕೆ ಆಹಾರ ಸೇವನೆಯಿಂದ ರಕ್ತನಾಳಗಳು ಗಟ್ಟಿಯಾಗುವುದು, ಅಲ್ಜೈಮರ್ಸ್, ಲಿವರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಕೊಬ್ಬು ಹೆಚ್ಚಾಗುವುದು, ಬೊಜ್ಜು, ಉದರದ ಕಾಯಿಲೆ ಮತ್ತು ಅನ್ನನಾಳದ ಕ್ಯಾನ್ಸರ್ ಬರುವ ಅಪಾಯವಿದೆ. ಇದಲ್ಲದೆ, ಹೋಟೆಲ್‌ಗಳಲ್ಲಿ ಕೆಲವು ಪದಾರ್ಥಗಳನ್ನು ಹೆಚ್ಚಾಗಿ ಹುರಿಯಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರಘು ಡಿ.ಕೆ ತಿಳಿಸುತ್ತಾರೆ.
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.