Children Internet Usage Survey: ಆಧುನಿಕ ಯುಗದಲ್ಲಿ ಸ್ಮಾರ್ಟ್ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ, ಮಕ್ಕಳಲ್ಲಿ ಈ ಬೆಳವಣಿಗೆ ತೀರಾ ಹೆಚ್ಚಾಗುತ್ತಿರುವುದು ಆತಂಕ ಮೂಡಿಸುತ್ತಿದೆ. ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಆತಂಕಕಾರಿ ವಿಷಯಗಳು ಹೊರಬಿದ್ದಿವೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಗೇಮಿಂಗ್ ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಕೋಪ, ಅಸಹನೆ, ಸೋಮಾರಿತನ ಹೆಚ್ಚಾಗುತ್ತಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದೇಶದ 368 ನಗರ ಜಿಲ್ಲೆಗಳಿಂದ 9-17 ವರ್ಷ ವಯಸ್ಸಿನ 70,000 ಮಕ್ಕಳ ಪೋಷಕರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ. ಶೇ 47ರಷ್ಟು ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮ, ವಿಡಿಯೋಗಳು, OTT ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಆಟಗಳಲ್ಲಿ ದಿನಕ್ಕೆ ಸರಾಸರಿ 3 ಗಂಟೆಗಳಿಂದ ಹೆಚ್ಚಿನ ಸಮಯ ಕಳೆಯುತ್ತಾರೆ ಎಂದು ಹೇಳಿದ್ದಾರೆ. ಕೆಲವು ಮಕ್ಕಳು ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಶೇ 10ರಷ್ಟು ಪೋಷಕರು ಹೇಳಿದರೆ, ಶೇ 66ರಷ್ಟು ನಗರ ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಶೇ 58ರಷ್ಟು ಪೋಷಕರು ಸ್ಮಾರ್ಟ್ಫೋನ್ ಬಳಕೆಯಿಂದಾಗಿ ಮಕ್ಕಳಲ್ಲಿ ಕೋಪ, ಅಸಹನೆ ಮತ್ತು ಸೋಮಾರಿತನ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೊಬೈಲ್ನಲ್ಲಿ ಜಾಸ್ತಿ ಕಾಲ ಕಳೆಯುವುದರಿಂದ ಮಕ್ಕಳಲ್ಲಿ ಆಕ್ರಮಣಶೀಲತೆಯ ಮನೋಭಾವ ಹೆಚ್ಚಿದೆ ಎಂದು ಶೇ 58ರಷ್ಟು ಪೋಷಕರು ಹೇಳಿದ್ದಾರೆ. ಶೇ 49ರಷ್ಟು ಪೋಷಕರು ತಮ್ಮ ಮಕ್ಕಳು ತಾಳ್ಮೆ ಕಳೆದುಕೊಂಡಿದ್ದಾರೆ ಎಂದರೆ, ಶೇ 49ರಷ್ಟು ಪೋಷಕರು ನಮ್ಮ ಮಕ್ಕಳು ಸೋಮಾರಿಯಾಗುತ್ತಿದ್ದಾರೆ ಎಂದಿದ್ದಾರೆ. ಶೇ 42ರಷ್ಟು ಪೋಷಕರು ಸ್ಮಾರ್ಟ್ಫೋನ್ ಬಳಕೆಯಿಂದ ನಮ್ಮ ಮಕ್ಕಳು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದು, ಶೇ 30ರಷ್ಟು ಪೋಷಕರು ನಮ್ಮ ಮಕ್ಕಳು ಅತಿಯಾದ ಕೋಪ ತೋರಿಸುತ್ತಿದ್ದಾರೆ ಎಂದಿದ್ದಾರೆ. ಶೇ.19ರಷ್ಟು ಪೋಷಕರು ತಮ್ಮ ಮಕ್ಕಳು ಸಂತೋಷದಿಂದ ಇದ್ದಾರೆ ಎಂದು ಹೇಳಿದ್ರೆ, ಶೇ.4ರಷ್ಟು ಪೋಷಕರು ಸಾಮಾಜಿಕವಾಗಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.
ಪೋಷಕರ ಆಗ್ರಹವೇನು?: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸಲು ಪೋಷಕರ ಒಪ್ಪಿಗೆ ಖಚಿತಪಡಿಸಿಕೊಳ್ಳಲು ಹೊಸ ಡೇಟಾ ಭದ್ರತಾ ಕಾನೂನು ತರಬೇಕು ಎಂಬುದು ಶೇ 66ರಷ್ಟು ಪೋಷಕರ ಆಗ್ರಹ. ಶೇ 33ರಷ್ಟು ಪೋಷಕರು, ಆಧಾರ್ ಪರಿಶೀಲನೆ ಮೂಲಕ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳಿಗೆ ಅನುಮತಿ ನೀಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಇದು ಐಫೋನ್‌ಪ್ರಿಯರಿಗೆ ಒಳ್ಳೆಯ ಸುದ್ದಿ ಅಲ್ಲ! ಏನದು ಗೊತ್ತಾ?