ಮಹಿಳೆಯರನ್ನು ಬಲಿ ಪಡೆಯುವ ಅನೇಕ ಮಾರಕ ಕಾಯಿಲೆಗಳು ಇವೆ. ಇದರಲ್ಲಿ ಎರಡು ರೀತಿಯ ಕ್ಯಾನ್ಸರ್ಗಳು ಪ್ರಮುಖವಾಗಿವೆ. ಒಂದನೆಯದು ಸ್ತನ ಕ್ಯಾನ್ಸರ್, ಎರಡನೆಯದು ಗರ್ಭಕಂಠದ ಕ್ಯಾನ್ಸರ್. ಗರ್ಭಕಂಠದ ಕ್ಯಾನ್ಸರ್ಗೆ ಇಂಗ್ಲಿಷ್‌ನಲ್ಲಿ ಸರ್ವಿಕಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಕೆಲವರಿಗೆ ಗೊತ್ತಿದೆ. ಆದರೆ, ಗರ್ಭಕಂಠದ ಕ್ಯಾನ್ಸರ್ ಕುರಿತು ಬಹುತೇಕ ಜನರಿಗೆ ಗೊತ್ತಿಲ್ಲ. ಆರಂಭದಲ್ಲೇ ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚದಿದ್ದರೆ, ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಸುತ್ತಾರೆ.
ಗರ್ಭಕಂಠದ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ?:ಹ್ಯೂಮನ್ ಪ್ಯಾಪಿಲೋಮವೈರಸ್ನಿಂದ (Human Papillomavirus - HPV) ಗರ್ಭಕಂಠದ ಕ್ಯಾನ್ಸರ್ ಸಂಭವಿಸುತ್ತದೆ. ಈ ಕಾಯಿಲೆಯು ಆನುವಂಶಿಕವಾಗಿ ಬರಬಹುದು. ಇದು ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಉಂಟಾಗುತ್ತದೆ. ಈ ಸೋಂಕು ಅನೇಕ ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ದೇಹವನ್ನು ಪ್ರವೇಶಿಸಬಹುದು. ಇದರ ಹೊರತಾಗಿಯೂ ಇನ್ನು ಕೆಲವು ಕಾರಣಗಳಿಂದಲೂ ಸಹ ಕಾಯಿಲೆ ಬರುವ ಅವಕಾಶ ಇರುತ್ತದೆ ಎನ್ನುತ್ತಾರೆ ತಜ್ಞರು.
ದೇಹಕ್ಕೆ ಪ್ರವೇಶ ತುಂಬಾ ನಿಧಾನ: ಹ್ಯೂಮನ್ ಪ್ಯಾಪಿಲೋಮವೈರಸ್ ದೇಹವನ್ನು ಪ್ರವೇಶಿಸಿದ ನಂತರ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಆದರೆ, ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಂದರೆ, ಸುಮಾರು 15 ರಿಂದ 20 ವರ್ಷಗಳಲ್ಲಿ ಕ್ಯಾನ್ಸರ್ ರೂಪ ಪಡೆಯುತ್ತದೆ. ಇದರ ನಂತರವೇ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ತಜ್ಞರ ಮಾಹಿತಿ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು:
- ಈ ಕ್ಯಾನ್ಸರ್ ಬಂದವರಿಗೆ ಪಿರಿಯಡ್ಸ್ ಸಮಯದಲ್ಲಿ ಭಾರೀ ರಕ್ತಸ್ರಾವ ಉಂಟಾಗುತ್ತದೆ.
- ಹೊಟ್ಟೆಯ ಕೆಳಭಾಗದಲ್ಲಿ ನೋವು ಬರುತ್ತದೆ.
- ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಯದಲ್ಲೂ ನೋವಾಗುತ್ತದೆ.
- ಸಂಭೋಗದ ನಂತರ ಯೋನಿಯಲ್ಲಿ ನೋವು ಮತ್ತು ಉರಿಯೂತದ ಅನುಭವವಾಗುತ್ತದೆ.
- ಮುಟ್ಚು ನಿಲ್ಲುವ ಸಮಯದಲ್ಲಿ ಲೈಂಗಿಕ ಕ್ರಿಯೆ ಹೊಂದಿದ್ದರೆ, ಸಂಭೋಗದ ನಂತರ ರಕ್ತಸ್ರಾವವಾಗುತ್ತದೆ.
- ದುರ್ವಾಸನೆಯುಳ್ಳ ಯೋನಿ ಸ್ರಾವವಾಗುತ್ತದೆ.
- ಆಯಾಸ, ಆಲಸ್ಯ ಮತ್ತು ಅತಿಸಾರದಿಂದ ಹೆಚ್ಚಿನ ತೊಂದರೆಯಾಗುತ್ತದೆ.
- ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.