ಹೈದರಾಬಾದ್: ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿ ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆ ಎಂದರೆ ಸೊಳ್ಳೆಯ ಕಾಟ. ಸಂಜೆಯಾದಕ್ಷಣ ಮನೆಗೆ ದಾಳಿ ಇಡುವ ಸೊಳ್ಳೆಗಳು ಯಾವುದೇ ಕಾಯಿಲ್, ಬತ್ತಿ, ಧೂಪಗಳನ್ನು ಹಾಕುವುದು ಸೇರಿದಂತೆ ಯಾವುದೇ ಮಾರ್ಗಕ್ಕೂ ಇವು ಜಗ್ಗುವುದಿಲ್ಲ. ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆ ನಿಮ್ಮ ಮನೆಯಲ್ಲೂ ಇದೆಯಾ? ಹಾಗಾದರೆ ಅದರ ನಿವಾರಣೆಗೆ ಸುಲಭ ಮಾರ್ಗ ಇಲ್ಲಿದೆ.
ಪರದೆಯ ರಕ್ಷಣೆ: ತಜ್ಞರ ಪ್ರಕಾರ, ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಇರುವ ಪ್ರಮುಖ ಮಾರ್ಗ ಎಂದರೆ ಪರದೆಗಳು. ಮನೆಯ ಬಾಗಿಲು, ಮಲಗುವ ಹಾಸಿಗೆಗೆ ಪ್ರತ್ಯೇಕ ಪರದೆ ವ್ಯವಸ್ಥೆ ಮಾಡಬೇಕು. ಈ ಮೂಲಕ ಸೊಳ್ಳೆಗಳು ನಿಮ್ಮ ಮೇಲೆ ದಾಳಿ ಮಾಡದಂತೆ ತಡೆಯಬಹುದು. ತೆಳುವಾದ ಈ ಪರದೆಗಳು ಗಾಳಿ- ಬೆಳಕಿನ ಸರಾಗ ಚಲನೆಗೂ ಅನುಕೂಲ ಮಾಡಿಕೊಡುತ್ತದೆ.
ಸೊಳ್ಳೆ ಜಾಲ: ಸೊಳ್ಳೆ ಕಾಟದಿಂದ ರಕ್ಷಣೆ ಪಡೆಯಬಹುದು ಎಂಬ ಕಾರಣಕ್ಕೆ ಕಿಟಕಿಯನ್ನು ಬಂದ್ ಮಾಡಿದರೆ, ಗಾಳಿ- ಬೆಳಕಿನ ಸಮಸ್ಯೆ ಎದುರಾಗುತ್ತದೆ. ಇದನ್ನು ತಪ್ಪಿಸಲು ಕಿಟಕಿಗಳಿಗೆ ಸೊಳ್ಳೆಗಳು ಬಾರದಂತಹ ಪರದೆ ಜಾಲವಗಳನ್ನು ಹಾಕಬಹುದು. ಸದ್ಯ ಯುಪಿವಿಸಿ ಮತ್ತು ಮರದ ಪ್ಲಾಸ್ಟಿಕ್ ಸಂಯೋಜನೆಯ ಈ ರೀತಿಯ ಚೌಕಟ್ಟುಗಳು ಲಭ್ಯವಿದ್ದು, ಇವುಗಳನ್ನು ಮನೆ ಬಾಗಿಲು, ಕಿಟಕಿಗೆ ಅಳವಡಿಸಬಹುದು. ಇದು ಗಾಳಿಯಾಡಲು ಕೂಡ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಸೊಳ್ಳೆಗಳಿಂದ ರಕ್ಷಣೆಯನ್ನೂ ನೀಡುತ್ತದೆ.