ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ . ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.
ಒಳ್ಳೆಯ ಬ್ಯಾಕ್ಟೀರಿಯಗಳ ಹೆಚ್ಚಳ: ಮುಂಜಾನೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ಸೇವಿಸುವುರಿಂದ ನಿಮ್ಮ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೇರಳವಾಗುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಜತೆಗೆ ಅಜೀರ್ಣ, ವಾಯು, ಅನಿಲದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.
ದೇಹದಿಂದ ವಿಷಾಂಶವನ್ನು ಹೊರ ಹಾಕುವ ಕರಿಬೇವು: ಕರಿಬೇವಿನ ಎಲೆಗಳಲ್ಲಿರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಬೇಡವಾದ ವಿಷವಿದ್ದರೆ ಹೊರಹಾಕುತ್ತದೆ. ಇದರಿಂದ ಆರೋಗ್ಯಕರವಾಗಿರಬಹುದು. ಅಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ: ಕರಿಬೇವಿನ ಎಲೆಗಳನ್ನು ಹಾಗೇ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂಬುದನ್ನು ವೈದ್ಯರು ತಿಳಿಸಿದ್ದಾರೆ. 'ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಟ್ರಾನ್ಸ್‌ಲೇಶನಲ್ ರಿಸರ್ಚ' ನಲ್ಲಿ ಪ್ರಕಟವಾದ 2013ರ ಸಂಶೋಧನೆ ಟೈಪ್ 2 ಮಧುಮೇಹ ಹೊಂದಿರುವ ಜನರು ಮೂರು ತಿಂಗಳ ಕಾಲ ದಿನಕ್ಕೆ ಎರಡು ಬಾರಿ 10 ಕರಿಬೇವಿನ ಎಲೆಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂಬುದನ್ನು ಕಂಡುಹಿಡಿದಿದೆ. ಈ ಸಂಶೋಧನೆಯಲ್ಲಿ ನಮ್ಮ ಹೈದರಾಬಾದ್‌ನ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಮಧುಮೇಹ ವಿಭಾಗದ ಪ್ರಾಧ್ಯಾಪಕ ಡಾ.ಸುನೀಲ್ ರಾವ್ ಕೂಡ ಭಾಗವಹಿಸಿದ್ದರು.
ಆರೋಗ್ಯಕರ ತೂಕ: ಕರಿಬೇವಿನ ಎಲೆಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಹಸಿವನ್ನು ದೀರ್ಘಕಾಲದವರೆಗೆ ತಡೆಯುತ್ತದೆ. ಕರಿಬೇವು ತಿಂದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು.