ನ್ಯೂಯಾರ್ಕ್:ಕೋವಿಡ್ 19 ಸಾಂಕ್ರಾಮಿಕತೆಯ ಆರಂಭದ ಬಳಿಕ ಹದಿಹರೆಯದವರು ಮತ್ತು ಯುವ ವಯಸ್ಕರು ಅದರಲ್ಲೂ ವಿಶೇಷವಾಗಿ ಬಾಲಕಿಯರಲ್ಲಿ ಮಾನಸಿಕ ಖಿನ್ನತೆ ಶಮನಕಾರಿ (ಆ್ಯಂಟಿಡಿಪ್ರೆಸೆಂಟ್) ಬಳಕೆ ಅತಿ ಹೆಚ್ಚಾಗಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಪಿಡಿಯಾಟ್ರಿಕ್ಸ್ನಲ್ಲಿ ಪ್ರಕಟಿಸಲಾಗಿದೆ. ಮಾರ್ಚ್ 2020ರ ಬಳಿಕ 12ರಿಂದ 25 ವರ್ಷ ವಯೋಮಾನದವರಲ್ಲಿ 'ಖಿನ್ನತೆ ಶಮನಕಾರಿ' ಬಳಕೆ ದರದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ ಎಂಬ ಅಂಶವನ್ನು ಸಂಶೋಧನೆ ತೋರಿಸಿದೆ.
ಮಾರ್ಚ್ 2020ಕ್ಕೆ ಮುಂಚಿತವಾಗಿ ಹದಿಹರೆಯದವರು ಮತ್ತು ಯುವ ಜನತೆಯಲ್ಲಿ ಖಿನ್ನತೆ ಶಮನಕಾರಿ ಬಳಕೆ ಹೆಚ್ಚಿತ್ತು. ಈ ಟ್ರೆಂಡ್ ಕೋವಿಡ್ ನಂತರದಲ್ಲಿ ಮತ್ತಷ್ಟು ಏರಿಕೆಯಾಗಿದೆ ಎಂದು ನಮ್ಮ ಅಧ್ಯಯನದ ಫಲಿತಾಂಶ ತಿಳಿಸುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ, ಅಮೆರಿಕದ ಮಿಚಿಗನ್ ಹೆಲ್ತ್ ಯೂನಿವರ್ಸಿಟಯ ಮಕ್ಕಳ ತಜ್ಞ ಮತ್ತು ಸಂಶೋಧಕರೂ ಆಗಿರುವ ಕಾವೊ ಪಿಂಗ್ ಚುವಾ ಮಾಹಿತಿ ನೀಡಿದ್ದಾರೆ.
ಖಿನ್ನತೆ ಶಮನಕಾರಿ ಬಳಕೆ ದರ ಕೋವಿಡ್ ಸಂದರ್ಭದಲ್ಲಿ ಬಾಲಕಿಯರಲ್ಲಿ ಏರಿಕೆಯಾಗಿದೆ. 12ರಿಂದ 17 ವರ್ಷದ ಬಾಲಕಿಯರು ಶೇ.130ರಷ್ಟು ಇದರ ಬಳಕೆ ಮಾಡಿದರೆ, 18-25 ವರ್ಷದವರು ಶೇ.60ರಷ್ಟು ಬಳಸಿದ್ದಾರೆ ಎಂದು ವರದಿ ಹೇಳುತ್ತದೆ.