ನವದೆಹಲಿ: ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಸುಮಾರು 294 ಮಿಲಿಯನ್ ಜನರು ಅಧಿಕ ರಕ್ತದೊತ್ತಡದೊಂದಿಗೆ ಜೀವಿಸುತ್ತಿದ್ದಾರೆ ಎಂದು ಆಗ್ನೇಯ ಏಷ್ಯಾದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಸೈಮಾ ವಾಝೆದ್ ಮಾಹಿತಿ ನೀಡಿದ್ದಾರೆ.
ಪ್ರತೀ ವರ್ಷ ಮೇ 17ರಂದು ವಿಶ್ವ ಅಧಿಕ ರಕ್ತದೊತ್ತಡ ದಿನಾಚರಿಸಲಾಗುತ್ತದೆ. ಈ ದಿನದ ಮೂಲಕ ಸದ್ದಿಲ್ಲದೆ ಜನರನ್ನು ಕಾಡುವ ಈ ಆರೋಗ್ಯ ಸಮಸ್ಯೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮತ್ತು ಅದನ್ನೆದುರಿಸುವ ಕುರಿತ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ. ಈ ವರ್ಷದ ವಿಶ್ವ ಅಧಿಕ ರಕ್ತದೊತ್ತಡ ದಿನದ ಧ್ಯೇಯ ವಾಕ್ಯ ರಕ್ತದೊತ್ತಡದ ನಿಖರ ಅಳತೆ, ನಿಯಂತ್ರಣ, ಹೆಚ್ಚು ಕಾಲ ಬದುಕಿ ಎಂಬುದಾಗಿದೆ.
ಈ ಸಮಸ್ಯೆಯಲ್ಲಿ ಆರಂಭಿಕ ಪತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಅರ್ಧದಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ವಯಸ್ಕರಲ್ಲಿ ಅರ್ಧದಷ್ಟು ಜನರಿಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಪ್ರತೀ 6ರಲ್ಲಿ ಒಬ್ಬ ವ್ಯಕ್ತಿಯಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿಲ್ಲ. ಅನಿಯಂತ್ರಿತ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಅಕಾಲಿಕ ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ಸೈಮಾ ವಾಝೆದ್.