ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿರುವ ಸಿನಿಮಾ 'ಕೋಟಿ'. ನಟ ಡಾಲಿ ಧನಂಜಯ್ ಕೋಟಿ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಯಾರಿಗೂ ಮೋಸ ಮಾಡದೇ, ನೋವು ನೀಡದೆ, ಒಂದು ಕೋಟಿ ರೂ. ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಹೊಂದಿರುವ ಹುಡುಗನ ಕಥೆಯಾಗಿದೆ.
ಕೋಟಿ ಸಿನಿಮಾ ಸನ್ನಿವೇಶ (ETV Bharat) ಚಿತ್ರದ ಇನ್ನೊಂದು ವಿಶೇಷತೆ ಎಂದರೆ ಇಬ್ಬರು ಹೊಸ ಪ್ರತಿಭೆಗಳು. ಧನಂಜಯ್‌ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮನಾಗಿ ಪೃಥ್ವಿ ಶಾಮನೂರು ಮತ್ತು ತಂಗಿಯ ಪಾತ್ರದಲ್ಲಿ ತನುಜಾ ವೆಂಕಟೇಶ್ ಇದ್ದಾರೆ. ಯುವ ಪ್ರತಿಭೆಗಳ ಅಭಿನಯದ ಬಗ್ಗೆ ಧನಂಜಯ್ ಮತ್ತು ತಾರಾ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಪೃಥ್ವಿ ಶಾಮನೂರು (ETV Bharat) ಉದಯೋನ್ಮುಖ ನಟ ಪೃಥ್ವಿ ಶಾಮನೂರು ಈಗಾಗಲೇ ಹರಿಪ್ರಸಾದ್ ಜಯಣ್ಣ ನಿರ್ದೇಶನದ 'ಪದವಿಪೂರ್ವ' ಚಿತ್ರದ ಮುಖಾಂತರ ಸಿನಿ ಪಯಣ ಆರಂಭಿಸಿದ್ದಾರೆ. ಕೋಟಿ ಸಿನಿಮಾದಲ್ಲಿ ಇವರ ಪಾತ್ರ ನಚ್ಚಿ, ಕೋಟಿಯ ಪ್ರೀತಿಯ ಸಹೋದರ. ಯಾರಿಗೂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈತ ಅಕ್ಕ - ಅಣ್ಣಂದಿರನ್ನು ಕಾಡಿಸುತ್ತ, ನಗಿಸುತ್ತ ಮನೆಗೊಂದು ಕಳೆ ತರುವ ತುಂಟ. ಹಾಗೆಯೇ, ಕೋಟಿಯ ತಂಗಿ ಮಹತಿಯ ಪಾತ್ರದಲ್ಲಿ ರಂಗಭೂಮಿ ಹಿನ್ನೆಲೆಯ ತನುಜಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ.
ತನುಜಾ ವೆಂಕಟೇಶ್ (ETV Bharat) ಪಾತ್ರದ ಬಗ್ಗೆ ಮಾತನಾಡಿದ ಪೃಥ್ವಿ ಶಾಮನೂರು, ''ನಚ್ಚಿ ಎಂಬುದು ಒಂದು ಸಣ್ಣ ಪಾತ್ರವಾದರೂ ತುಂಬಾ ಇಂಪ್ಯಾಕ್ಟ್ ಹೊಂದಿದೆ. ಇಷ್ಟು ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಇದೆ'' ಎಂದರು.
''ನಾನು ಕೋಟಿಯ ತಂಗಿ ಮಹತಿಯಾಗಿ ಅಭಿನಯಿಸಿದ್ದೇನೆ. ಇದೊಂದು ಪ್ರಮುಖ ಪಾತ್ರ. ಧನಂಜಯ್ ಅಣ್ಣ, ತಾರಮ್ಮ ಮತ್ತು ಪೃಥ್ವಿ ಅವರೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸಿರುವುದು ಕುಟುಂಬದ ಜೊತೆ ಇದ್ದಂತೆ ಅನಿಸಿತು" ಎಂದು ನಟಿ ತನುಜಾ ವೆಂಕಟೇಶ್ ಸಂತಸ ಹಂಚಿಕೊಂಡರು.
ಚಿತ್ರದ ನಿರ್ದೇಶಕ ಪರಮ್ ಮಾತನಾಡಿ, ''ಈಗಾಗಲೇ ಹೀರೋ ಆಗಿ 'ಪದವಿಪೂರ್ವ' ಚಿತ್ರದಲ್ಲಿ ನಟಿಸಿರುವ ಪೃಥ್ವಿ ಶಾಮನೂರು ನಚ್ಚಿ ಪಾತ್ರವನ್ನು ಇಷ್ಟಪಟ್ಟು, ಒಪ್ಪಿ ನಟಿಸಿದ್ದಾರೆ. ಅವರ ಅಭಿನಯದ ಎರಡು ದೃಶ್ಯಗಳನ್ನಂತೂ ನೀವು ತುಂಬಾ ಇಷ್ಟಪಡುವಿರಿ. ಮಹತಿಯ ಪಾತ್ರ ಮಾಡಿರುವ ತನುಜಾಗೆ ಇದು ಮೊದಲ ಸಿನಿಮಾ. ಅವರ ಅಭಿನಯದಲ್ಲಿ ತುಂಬಾ ಲೈಫ್ ಇದೆ'' ಎಂದು ಹೇಳಿದರು.
ಇದನ್ನೂ ಓದಿ:'ಅಕ್ಯುಪಂಕ್ಚರ್' ತನ್ನಿಷ್ಟದ ಚಿಕಿತ್ಸೆ ಎಂದ ನಟಿ ಮಲ್ಲಿಕಾ ಶೆರಾವತ್ - mallika sherawat shares acupuncture treatment
ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. '777 ಚಾರ್ಲಿ' ಖ್ಯಾತಿಯ ನೊಬಿನ್ ಪೌಲ್ ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. 'ಕಾಂತಾರ' ಸಿನಿಮಾದಿಂದ ಪ್ರಶಂಸೆ ಗಳಿಸಿದ್ದ ಪ್ರತೀಕ್ ಶೆಟ್ಟಿ ಕೋಟಿ ಚಿತ್ರದ ಸಂಕಲನಕಾರರಾಗಿದ್ದು, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮರಾಮನ್ ಆಗಿದ್ದಾರೆ.
ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೋಟಿ ಚಿತ್ರವು ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:'ಉತ್ತರಕಾಂಡ'ದ ವೀರವ್ವ ಪಾತ್ರದಲ್ಲಿ ಜಾಕಿ ಬೆಡಗಿ ಭಾವನಾ ಮೆನನ್; ಪೋಸ್ಟರ್ ರಿಲೀಸ್ - Bhavana Poster