ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ, ಸೌತ್ ಸ್ಟಾರ್ ನಟಿ ಸಾಯಿ ಪಲ್ಲವಿ ದೇವಿ ಸೀತೆಯಾಗಿ ಮತ್ತು ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿರುವ ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'. ಚಿತ್ರದ ತಾರಾಬಳಗವನ್ನು ಬಹಿರಂಗಪಡಿಸಲು ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಪೌರಾಣಿಕ ಸಿನಿಮಾದ ಸುತ್ತಲಿರುವ ಮಾಹಿತಿ ಪ್ರಕಾರ, ನಿರ್ಮಾಪಕರು 2024ರ ರಾಮನವಮಿಯಂದು ಈ ಬಹುನಿರೀಕ್ಷಿತ ಚಿತ್ರವನ್ನು ಘೋಷಿಸಲು ಪ್ಲಾನ್ ಮಾಡುತ್ತಿದ್ದಾರೆ.
ಕೆಲ ತಿಂಗಳಿಂದ ರಾಮಾಯಣ ಕುರಿತು ಹಲವು ಊಹಾಪೋಹಗಳು ಹರಿದಾಡಿವೆ. ಬರುವ ಏಪ್ರಿಲ್‌ನಲ್ಲಿ 'ರಾಮಾಯಣ'ದ ಅಧಿಕೃತ ಘೋಷಣೆ ಆಗೋ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಸಿನಿಮಾದ ಅಧಿಕೃತ ಘೋಷಣೆಗಾಗಿ ಏಪ್ರಿಲ್ 17ರ ರಾಮ ನವಮಿಯ ಮಂಗಳಕರ ದಿನವನ್ನು ನಿಗದಿಪಡಿಸಲಾಗಿದೆ. ರಾಮನ ಕುರಿತ ಚಿತ್ರವಾಗಿರೋ ಹಿನ್ನೆಲೆ ರಾಮನವಮಿಯಂದು 'ರಾಮಾಯಣ' ಘೋಷಣೆ ಆಗಲಿದೆ. ಇದಕ್ಕಾಗಿ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಪ್ರಾಜೆಕ್ಟ್ ಹಿಂದಿರುವ ತಂಡ ಐದು ವರ್ಷಗಳಿಂದ 'ರಾಮಾಯಣ'ಕ್ಕಾಗಿ ಕೆಲಸ ಮಾಡುತ್ತಿದೆ. ಕಥೆ ಹೇಳುವಿಕೆ ಮತ್ತು ವಿಶುವಲ್ ವಿಚಾರವಾಗಿ ಪ್ರೀ ಪ್ರೊಡಕ್ಷನ್ ಕೆಲಸಗಳು ಜೋರಾಗೇ ನಡೆದಿವೆ.
ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಲ್ಲದೇ ಭಗವಾನ್ ಹನುಮಾನ್ ಆಗಿ ಸನ್ನಿ ಡಿಯೋಲ್, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಮತ್ತು ಶೂರ್ಪನಖಾ ಪಾತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ನಟಿಸಲಿದ್ದಾರೆ. ಈ ಮಹಾಕಾವ್ಯದ ಮೊದಲ ಭಾಗದ ಚಿತ್ರೀಕರಣ ಈ ತಿಂಗಳು ಮುಂಬೈನಲ್ಲಿ ಪ್ರಾರಂಭವಾಗಲಿದೆ. 2025ರ ದೀಪಾವಳಿ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿಯಿದೆ.