ಕೋಟ್ಯಂತರ ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಗಣ್ಯರ ಗುಣಗಾನಕ್ಕೆ ಪಾತ್ರರಾಗಿರುವ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್'. ಇಂದು ನಟನ 39ನೇ ಜನ್ಮದಿನ ಹಿನ್ನೆಲೆ, ಆಕರ್ಷಕ ಗ್ಲಿಂಪ್ಸ್ ಅನಾವರಣಗೊಳಿಸೋ ಮೂಲಕ ಚಿತ್ರತಂಡ ಸಿನಿಪ್ರಿಯರ ಕುತೂಹಲ ಕೆರಳಿಸಿದೆ. ಸಂಪೂರ್ಣ ಸಿನಿಮಾ ವೀಕ್ಷಿಸೋ ಸಿನಿಪ್ರಿಯರ ಕಾತರ ದುಪ್ಪಟ್ಟಾಗಿದೆ. ಕೆಜಿಎಫ್ ಸ್ಟಾರ್ ಮುಖ್ಯಭೂಮಿಕೆಯ ಸಿನಿಮಾ ಮಲೆಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.
ಕೆಜಿಎಫ್ ಮೂಲಕ ಅಭೂತಪೂರ್ವ ಯಶಸ್ಸು ಕಂಡಿರುವ ಕೆಜಿಎಫ್ ಸ್ಟಾರ್ ಯಶ್, ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಶೀರ್ಷಿಕೆಯ ಪ್ರಾಜೆಕ್ಟ್ನೊಂದಿಗೆ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಟಾಕ್ಸಿಕ್‌ನ ಮೊದಲ ನೋಟ ಈಗಾಗಲೇ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಗಮನಾರ್ಹ ಪ್ರತಿಕ್ರಿಯೆ ಸ್ವೀಕರಿಸಿದೆ. ಸಿನಿಮಾ ಸುತ್ತಲಿನ ಸದ್ದು ತೀವ್ರಗೊಳ್ಳುತ್ತಿದ್ದಂತೆ, ನಿರ್ದೇಶಕರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಬಹಳವಿದೆ. ಯಶ್ ಜೊತೆಗಿನ ಕೆಲಸದ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲವಿದೆ. ಅಂದಹಾಗೆ, ನಟನ ಮೇಲೆ ಸ್ಟೋರಿ ಪ್ರಭಾವ ಬೀರುತ್ತದೆಯೇ ಹೊರತು ನಿರ್ದೇಶಕರು ಪುರುಷರೋ ಅಥವಾ ಮಹಿಳೆಯೋ ಎಂಬುದಲ್ಲ ಎಂಬುದು ಗಮನಾರ್ಹ ಸಂಗತಿ. ಈ ವಿಷಯದ ಬಗ್ಗೆ ಸ್ವತಃ ಯಶ್ ಅವರೇ ಈ ಹಿಂದೆ ಮಾತನಾಡಿದ್ದರು. ಸದ್ಯ ಸೂಪರ್ ಸ್ಟಾರ್ನ ಸಿನಿಮಾಗೆ ಲೇಡಿ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
''ನಾನು ಸಿನಿಮಾದ ಕಥೆಯನ್ನು ನಂಬುತ್ತೇನೆ, ನಿರ್ದೇಶಕರು ಗಂಡೋ ಅಥವಾ ಹೆಣ್ಣೋ ಎಂಬುದಕ್ಕೆ ನಾನು ಮಹತ್ವ ಕೊಡುವುದಿಲ್ಲ'' ಎಂದು ಈ ಹಿಂದೆ ಯಶ್ ತಿಳಿಸಿದ್ದರು. ಅವರ ಮಾತುಗಳು ಸಿನಿಮಾ ಇಂಡಸ್ಟ್ರಿಯ ಬದಲಾವಣೆ, ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಪ್ರತಿಭೆ ಮುಖ್ಯ ಎಂಬುದು ಸಾಬೀತಾಗಿದೆ. ವಿಭಿನ್ನ ಕಥೆ ಹೇಳುವಿಕೆ ಮತ್ತು ಪವರ್ಫುಲ್ ಟ್ರ್ಯಾಕ್ ರೆಕಾರ್ಡ್‌ಗೆ ಹೆಸರುವಾಸಿಯಾಗಿರೋ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರೊಂದಿಗೆ ಸೌತ್ ಸೂಪರ್ಸ್ಟಾರ್ ಯಶ್ ಕೈ ಜೋಡಿಸಿರೋದು ಟಾಕ್ಸಿಕ್ ಸುತ್ತಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಬಾಲ ಕಲಾವಿದೆಯಾಗಿ ವೃತ್ತಿಜೀವನ ಆರಂಭಿಸಿದ ಗೀತು ಮೋಹನ್ ದಾಸ್, ಲೈಯರ್ಸ್ ಡೈಸ್ ( Liar's Dice) ಮತ್ತು ಮೂತೊನ್‌ನಂತಹ ಗಮನಾರ್ಹ ಚಿತ್ರಗಳ ಮೂಲಕ ನಿರ್ದೇಶಕಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. 1981ರ ಜೂನ್ 8ರಂದು ಕೇರಳದ ಕೊಚ್ಚಿಯಲ್ಲಿ ಗಾಯತ್ರಿ ದಾಸ್ ಆಗಿ ಜನಿಸಿದ ಗೀತು ಆರಂಭಿಕ ವರ್ಷಗಳಲ್ಲಿ ಮೋಹನ್ ಲಾಲ್ ಅವರಂತಹ ಖ್ಯಾತ ನಟರೊಂದಿಗೆ ತೆರೆಹಂಚಿಕೊಂಡರು. ಒನ್ನು ಮುತಾಲ್ ಪೂಜ್ಯಂ ವರೇ ಚಿತ್ರದಲ್ಲಿನ ಅಭಿನಯಕ್ಕಾಗಿ 1996ರಲ್ಲಿ ಅತ್ಯುತ್ತಮ ಬಾಲ ಕಲಾವಿದೆಯಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.