ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜೂನಿಯರ್ ಎನ್‌ಟಿಆರ್ ನಟನೆಯ ಬಹುನಿರೀಕ್ಷಿತ ಚಿತ್ರ 'ದೇವರ: ಭಾಗ 1' ತೆರೆಕಂಡು ಸೂಪರ್ ಹಿಟ್ ಆಗಿದೆ. ರಾಮ್ ಚರಣ್ ಜೊತೆಗೆ ತೆರೆಹಂಚಿಕೊಂಡಿದ್ದ ಆರ್ಆರ್ಅರ್ ಬ್ಲಾಕ್ಬಸ್ಟರ್ ಹಿಟ್ ಆಗಿ, ಜಾಗತಿಕ ಮಟ್ಟದ ಪ್ರೇಕ್ಷಕರನ್ನು ಆಕರ್ಷಿಸಿದ ನಂತರ ಬಂದ ಜೂನಿಯರ್ ಎನ್‌ಟಿಆರ್ ಅವರ ಬಹುನಿರೀಕ್ಷಿತ ಚಿತ್ರವಿದು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಹೊಂದಿದರೂ ಕೂಡಾ ಆ ವೇಗವನ್ನು ಉಳಿಸಿಕೊಳ್ಳುವಲ್ಲಿ ಇದೀಗ ಸವಾಲುಗಳನ್ನು ಎದುರಿಸುತ್ತಿದೆ. ಚಲನಚಿತ್ರ ನಿರ್ಮಾಪಕರು ತಮ್ಮ ಸಿನಿಮಾದ ಆರಂಭಿಕ ಯಶಸ್ಸನ್ನು ಸಂಭ್ರಮಿಸಿದ್ದರೂ ಸಹ, ಜೂನಿಯರ್ ಎನ್‌ಟಿಆರ್ ಚಿತ್ರದ ಸದ್ಯ ಪರಿಸ್ಥಿತಿ, ಪ್ರದರ್ಶನದ ಬಗ್ಗೆ ಬಹಿರಂಗಪಡಿಸಿದ್ದಾರೆ.
ದೇವರ ಸಿನಿಮಾ ಬಿಡುಗಡೆ ನಂತರ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಇಂದಿನ ಪ್ರೇಕ್ಷಕರಲ್ಲಿ ಹೆಚ್ಚುತ್ತಿರುವ ವಿಮರ್ಶಾತ್ಮಕ ಸ್ವಭಾವದ ಬಗ್ಗೆ ನಾಯಕ ನಟ ಜೂನಿಯರ್ ಎನ್‌ಟಿಆರ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಭಾರತದಲ್ಲಿ ತನ್ನ ಮೊದಲ 12 ದಿನಗಳಲ್ಲಿ 253.25 ಕೋಟಿ ರೂಪಾಯಿ (ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ) ಗಳಿಸಿದೆ. ಅದಾಗ್ಯೂ, ಈ ಚಿತ್ರಕ್ಕೆ ವಿಮರ್ಶಕರು ಮತ್ತು ವೀಕ್ಷಕರಿಂದ ಮಿಶ್ರ ವಿಮರ್ಶೆ ಬಂದಿವೆ. "ಇತ್ತೀಚಿನ ದಿನಗಳಲ್ಲಿ ನಾವು ಪ್ರೇಕ್ಷಕರಾಗಿ ಬಹಳಾನೇ ನಕಾರಾತ್ಮಕವಾಗಿದ್ದೇವೆ. ಇನ್ನು ಮುಂದೆ ನಾವು ಮುಗ್ಧ ರೀತಿಯಲ್ಲಿ ಸಿನಿಮಾವನ್ನು ಎಂಜಾಯ್ ಮಾಡಲು ಸಾಧ್ಯವಿಲ್ಲ" ಎಂದು ಜೂನಿಯರ್ ಎನ್‌ಟಿಆರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನಿಯರ್ ಎನ್‌ಟಿಆರ್ ಬಾಲ್ಯದ ಮುಗ್ಧತೆ ಬಗ್ಗೆ ಮಾತನಾಡಿದರು. ಯಾವುದೇ ಪೂರ್ವಾಗ್ರಹವಿಲ್ಲದೇ ಚಲನಚಿತ್ರಗಳನ್ನು ವೀಕ್ಷಿಸುವ ತಮ್ಮ ಪುತ್ರರಾದ ಅಭಯ್ ಮತ್ತು ಭಾರ್ಗವ್ ಅವರೊಂದಿಗೆ ಹೋಲಿಕೆ ಮಾಡಿದರು. "ನಾನು ನನ್ನ ಮಕ್ಕಳನ್ನು ನೋಡುವಾಗ, ಅವರು ಯಾವ ನಟ ಅಥವಾ ಯಾವ ಸಿನಿಮಾವನ್ನು ನೋಡುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಕೇವಲ ಸಿನಿಮಾಗಳನ್ನು ನೋಡಿ ಆನಂದಿಸುತ್ತಾರೆ. ಆದ್ರೆ ನಾವೇಕೆ ಹಾಗೆ ಮುಗ್ಧರಾಗಿರಲು ಸಾಧ್ಯವಿಲ್ಲ ಎಂಬ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ'' ಎಂದು ತಿಳಿಸಿದ್ದಾರೆ.
ಇಂದಿನ ಪ್ರೇಕ್ಷಕರು ಸಿನಿಮಾಗಳನ್ನು ಅತಿಯಾಗಿ ವಿಶ್ಲೇಷಿಸುವ ಪ್ರವೃತ್ತಿಯ ಬಗ್ಗೆಯೂ ಮಾತನಾಡಿದರು. "ಇಂದು ನಾವು ಪ್ರತೀ ಸಿನಿಮಾಗಳನ್ನು ವಿಶ್ಲೇಷಿಸುವ ಸಲುವಾಗೇ ವೀಕ್ಷಿಸುತ್ತಿದ್ದೇವೆ. ನಾವೆಲ್ಲರೂ ಚಲನಚಿತ್ರಗಳನ್ನು ನಿರಂತರವಾಗಿ ಜಡ್ಜ್ ಮಾಡುತ್ತೇವೆ, ವಿಶ್ಲೇಷಿಸುತ್ತೇವೆ ಮತ್ತು ಅತಿಯಾಗಿ ಯೋಚಿಸುತ್ತೇವೆ. ಬಹುಶಃ ನಾವು ಅತಿಯಾಗಿ ಸಿನಿಮಾಗೆ ಒಡ್ಡಿಕೊಂಡಿರುವುದೇ ನಮ್ಮನ್ನು ಹೀಗೆ ಮಾಡಿದೆ" ಎಂದು ನಟ ತಿಳಿಸಿದರು.