ದಕ್ಷಿಣ ಚಿತ್ರರಂಗದ ಹೆಸರಾಂತ ನಟ ವಿಜಯ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (The Greatest of All Time). ಇದನ್ನು 'GOAT' ಎಂದೂ ಕರೆಯಲಾಗುತ್ತದೆ. ಈ ಚಿತ್ರದ ಪ್ರಮುಖ ದೃಶ್ಯವೊಂದನ್ನು ಸೆರೆಹಿಡಿಯೋ ಸಲುವಾಗಿ ನಿನ್ನೆ (ಮಾರ್ಚ್ 18, ಸೋಮವಾರ) ವಿಜಯ್ ಕೇರಳದ ತಿರುವನಂತಪುರಕ್ಕೆ ಭೇಟಿ ನೀಡಿದ್ದರು. 14 ವರ್ಷಗಳ ಸುದೀರ್ಘ ದಿನಗಳು ಬಳಿಕ ಕೇರಳಕ್ಕೆ ಮರಳಿದ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಬಹುಸಮಯದ ಬಳಿಕ ಸೌತ್ ಸೂಪರ್ ಸ್ಟಾರ್ ವಿಜಯ್ ಕೇರಳಕ್ಕೆ ಮರಳಿದ ಹಿನ್ನೆಲೆ, ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಮೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳ ಉತ್ಸಾಹ ವರ್ಣನಾತೀತ. ವಿಮಾನ ನಿಲ್ದಾಣದಿಂದ ಶೂಟಿಂಗ್ ಲೊಕೇಶನ್ವರೆಗೂ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮಿಷ್ಟದ ನಟನನ್ನು ನೋಡಲು ಅವರ ಕಾರನ್ನು ಅಭಿಮಾನಿಗಳು ಸುತ್ತುವರಿದರು. ಪರಿಣಾಮ ವಿಜಯ್ ಅವರ ಕಾರಿಗೆ ಹಾನಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗಳೇ ತಿಳಿಸಿವೆ. ಡ್ಯಾಮೇಜ್ ಆಗಿರುವ ಕಾರಿನ ವಿಡಿಯೋವೊಂದು ಆನ್ಲೈನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದು ನಟ ವಿಜಯ್ ಅವರ ಕಾರು ಎಂದು ಹೇಳಲಾಗುತ್ತಿದೆ.
ಭದ್ರತಾ ಕ್ರಮಗಳ ಹೊರತಾಗಿಯೂ, ಲೆಕ್ಕಕ್ಕೆ ಸಿಗದಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ವಿಜಯ್ ಅವರ ಕಾರಿನ ಸುತ್ತ ಸೇರಿದ್ದರು. ಪರಿಣಾಮ, ಅನಿರೀಕ್ಷಿತ ಹಾನಿ ಸಂಭವಿಸಿದೆ. ಜನಸಂದಣಿ ನಿಯಂತ್ರಿಸೋದು ಪೊಲೀಸರಿಗೆ ಹರಸಾಹಸವೇ ಆಗಿತ್ತು. ಮುಂಜಾನೆಯಿಂದಲೇ ವಿಜಯ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಕಟ್ಟಾ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ತಂಡ ಹರಸಾಹಸ ಪಡಬೇಕಾಯಿತು. ಅಂತಿಮವಾಗಿ, ವಿಜಯ್ ಅವರು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸಂಜೆ 4 ಗಂಟೆಯ ಬಳಿಕ ಕಾಣಿಸಿಕೊಂಡಾಗ "ದಳಪತಿ" ಎಂಬ ಹರ್ಷೊದ್ಘಾರಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು.
ಕೇರಳ, ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಶೂಟಿಂಗ್ ಜರುಗಲಿದೆ. ಹಲವು ದಿನಗಳವರೆಗೆ ಚಿತ್ರೀಕರಣ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಇಲ್ಲಿ ಚಿತ್ರೀಕರಿಸುವ ಯೋಜನೆ ಇದೆ. ಇದೊಂದು ಅದ್ಧೂರಿ ಸೀಕ್ವೆನ್ಸ್ ಎಂದು ನಂಬಲಾಗಿದೆ.