ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ತಾರೆ ವಿದ್ಯಾ ಬಾಲನ್ ಸೈಬರ್ ವಂಚನೆಗೊಳಗಾಗಿದ್ದಾರೆ. ಯಾರೋ ತಮ್ಮ ಹೆಸರನ್ನು ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಜನರಲ್ಲಿ ಹಣ ಕೇಳಿದ್ದಾರೆ ಎಂದು ಆರೋಪಿಸಿ ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಐಟಿ ಕಾಯ್ದೆಯ ಸೆಕ್ಷನ್ 66 (ಸಿ)ರ ಅಡಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ವಿದ್ಯಾ ಬಾಲನ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಆ್ಯಕ್ಟೀವ್ ಸೋಷಿಯಲ್ ಮೀಡಿಯಾ ಯೂಸರ್ ಆಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 9.2 ಮಿಲಿಯನ್ ಫಾಲೋವರ್ಗಳನ್ನು ಸಂಪಾದಿಸಿದ್ದು, ಈವರೆಗೆ 838 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ತಮ್ಮ ಸುಂದರ ಫೋಟೋಗಳ ಜೊತೆಗೆ ಅಭಿಮಾನಿಗಳು ಇಷ್ಟಪಡುವ ವಿಡಿಯೋಗಳು ಮತ್ತು ರೀಲ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಆದರೀಗ ಯಾರೋ ಒಬ್ಬರು ನಟಿಯ ಹೆಸರನ್ನು ಆರ್ಥಿಕ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಂಡಿರುವುದು ವಿದ್ಯಾ ಬಾಲನ್ ಅವರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ವಿದ್ಯಾಬಾಲನ್ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಮತ್ತು ಜಿಮೇಲ್ ಖಾತೆಯನ್ನು ಆರೋಪಿ ಸೃಷ್ಟಿಸಿರುವುದಾಗಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ಫೇಕ್ ಅಕೌಂಟ್ ಬಗ್ಗೆ ತಿಳಿದ ವಿದ್ಯಾ ಬಾಲನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಈ ಹಿಂದೆ ವಿದ್ಯಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಅಕೌಂಟ್ನ ಸ್ಟೋರಿನಲ್ಲಿ ನಕಲಿ ಖಾತೆ ಓಪನ್ ಆಗಿರುವುದಾಗಿ ಉಲ್ಲೇಖಿಸಿದ್ದರು.
ಇದನ್ನೂ ಓದಿ:ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ
ನಟಿಯ ಮುಂಬರುವ ಪ್ರಾಜೆಕ್ಟ್ ಬಗ್ಗೆ ಗಮನಿಸುವುದಾದರೆ, ಭೂಲ್ ಭುಲೈಯ್ಯಾ 3 ತಂಡ ಸೇರಲು ಸಜ್ಜಾಗುತ್ತಿದ್ದಾರೆ. ಸಿನಿಮಾದ ಎರಡನೇ ಭಾಗದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕಾರ್ತಿಕ್ ಆರ್ಯನ್ ಮೂರನೇ ಭಾಗದಲ್ಲೂ ಮುಂದುವರಿಯಲಿದ್ದು, ವಿದ್ಯಾ ಅವರನ್ನು ತಮ್ಮ ತಂಡಕ್ಕೆ ಸ್ವಾಗತಿಸಿದ್ದಾರೆ. ಚಿತ್ರದ ಮೂರನೇ ಭಾಗವನ್ನು ಅನೀಸ್ ಬಾಜ್ಮಿ ನಿರ್ದೇಶಿಸಲಿದ್ದಾರೆ. ಭೂಲ್ ಭುಲೈಯ್ಯಾ 2 ಅನ್ನೂ ಸಹ ಅವರೇ ನಿರ್ದೇಶಿಸಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್, ಪ್ರೇಕ್ಷಕರಿಗೆ ರೋಮಾಂಚಕ ಅನುಭವ ಒದಗಿಸುವ ಭರವಸೆ ನೀಡಿದ್ದಾರೆ. ಸಿನಿಮಾವನ್ನು ಮುಂದುವರೆಸುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇದೇ ದೀಪಾವಳಿಗೆ ಚಿತ್ರ ಬಿಡುಗಡೆ ಆಗಲಿದೆ. ಭೂಲ್ ಭುಲೈಯ್ಯಾ 1 ಮತ್ತು 2 ಪ್ರೇಕ್ಷಕರನ್ನು ಮನರಂಜಿಸುವುದರಲ್ಲಿ ಯಶಸ್ವಿ ಆಗೋ ಜೊತೆಗೆ ಬಾಕ್ಸ್ ಆಫೀಸ್ನಲ್ಲೂ ಉತ್ತಮ ವ್ಯವಹಾರ ನಡೆಸಿದೆ. ಹಾಗಾಗಿ ಪಾರ್ಟ್ 3 ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.
ಇದನ್ನೂ ಓದಿ:ಲಂಡನ್‌ನಿಂದ ಕೊಹ್ಲಿ ಫೋಟೋ ವೈರಲ್: ವಿರುಷ್ಕಾ ಪುತ್ರ 'ಅಕಾಯ್' ಹೆಸರಿನ ಅರ್ಥವೇನು ಗೊತ್ತಾ?