'ವಿದ್ಯಾರ್ಥಿ ವಿದ್ಯಾರ್ಥಿನಿಯರೇ', ಸ್ಯಾಂಡಲ್ವುಡ್ನಲ್ಲಿ ಟೀಸರ್ ಹಾಗೂ ಹಾಡುಗಳಿಂದಲೇ ಸುದ್ದಿಯಾಗುತ್ತಿರೋ ಸಿನಿಮಾ. ಚಂದನ್ ಶೆಟ್ಟಿ, ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರುಣ್ ಅಮುಕ್ತ ರಚಿಸಿ-ನಿರ್ದೇಶಿಸಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದೆ. ಇತ್ತೀಚೆಗೆ ದುಬೈನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಸಿನಿಮಾ ವೀಕ್ಷಿಸಿದ ಅನಿವಾಸಿ ಕನ್ನಡಿಗರು ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಇತ್ತೀಚೆಗೆ ಚಿತ್ರತಂಡ ಮಾಧ್ಯಮಗೋಷ್ಠಿ ಆಯೋಜಿಸಿ, ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭ ಚಂದನ್ ಶೆಟ್ಟಿ, ಸುನೀಲ್ ಪುರಾಣಿಕ್, ಅರವಿಂದ್ ರಾವ್, ಪ್ರಶಾಂತ್ ಸಂಬರ್ಗಿ, ದುಬೈನಲ್ಲಿ ಚಿತ್ರ ಬಿಡುಗಡೆ ಮಾಡಿರುವ ಓಎಂಜಿ ಮೂವೀಸ್ನ ಮಮತಾ ಸೆಂಧಿಲ್, ಅಮರ್, ಮನೋಜ್, ಮನಸ್ವಿ ಸೇರಿದಂತೆ ಚಿತ್ರತಂಡದ ಹಲವರು ಹಾಜರಿದ್ದರು.
ಚಂದನ್ ಶೆಟ್ಟಿ ಮಾತನಾಡಿ, 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಬಿಡುಗಡೆಯಾಗುತ್ತಿರುವ ನನ್ನ ಚೊಚ್ಚಲ ಚಿತ್ರ. ಈ ಚಿತ್ರವನ್ನು ಜನ ಒಪ್ಪುತ್ತಾರಾ? ನನ್ನ ಅಭಿನಯ ಇಷ್ಟವಾಗಲಿದೆಯಾ? ಎಂಬ ಭಯ ಇತ್ತು. ಸದ್ಯ ಒಂದು ಮಟ್ಟಕ್ಕೆ ರಿಲ್ಯಾಕ್ಸ್ ಆಗಿದ್ದೇನೆ. ಅದಕ್ಕೆ ಕಾರಣ ದುಬೈನಲ್ಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ. ಅಲ್ಲಿ ಸಾಕಷ್ಟು ಕನ್ನಡಿಗರು ಚಿತ್ರ ವೀಕ್ಷಿಸಿದ್ದಾರೆ. ಅವರು ಎಲ್ಲಾ ಸಿನಿಮಾಗಳನ್ನು ಅಷ್ಟು ಸುಲಭಕ್ಕೆ ಒಪ್ಪುವುದಿಲ್ಲ. ಇಡೀ ಚಿತ್ರಮಂದಿರ ತುಂಬಿತ್ತು. ಚಿತ್ರ ಮುಗಿದ ಮೇಲೆ ಎಲ್ಲರೂ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ನಾನು ಸದಾ ಚಿರಋಣಿ. ಈ ತಂಡದ ಭಾಗವಾಗಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟವಂತ. ನಮ್ಮ ನಿರ್ಮಾಪಕರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ಎಲ್ಲದಕ್ಕೂ ಬಹಳ ಸಹಕಾರ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನು ಹೀರೋ ಎನ್ನುವುದಕ್ಕಿಂತ, ಅಮರ್, ಭಾವನಾ, ಮನಸ್ವಿ, ಸಿಂಚನಾ ಮತ್ತು ಮನೋಜ್ ಪ್ರಮುಖ ಪಾತ್ರಧಾರಿಗಳು. ಅವರೆಲ್ಲರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಈ ಚಿತ್ರದ ನಿಜವಾದ ಹೀರೋ ನಿರ್ದೇಶಕರು. ಒಂದೊಳ್ಳೆ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ. ಮಕ್ಕಳು ಮತ್ತು ಅವರ ಪೋಷಕರಿಬ್ಬರೂ ಕುಳಿತು ಒಟ್ಟಿಗೆ ನೋಡುವಂಥ ಚಿತ್ರವಿದು. ಎಲ್ಲರೂ ಬಂದು ಚಿತ್ರ ನೋಡಿ ಎಂದು ಕೇಳಿಕೊಂಡರು.
ಅರುಣ್ ಅಮುಕ್ತ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದಷ್ಟೇ ಅಲ್ಲ, ಚಿತ್ರವನ್ನು ತಾವೇ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಮಗೆ ಯಾವ ಅಭಿಮಾನಿಗಳಿಲ್ಲ. ನಮ್ಮ ಚಿತ್ರ ನೋಡುವುದಕ್ಕೆ ಬರುವವರೇನಿದ್ದರೂ ಟ್ರೇಲರ್ ಮತ್ತು ಹಾಡುಗಳನ್ನು ನೋಡಿ ಬರಬೇಕು. ನಮ್ಮ ಪ್ರೇಕ್ಷಕರೇನಿದ್ದರೂ ಇಂದಿನ ಯುವಜನತೆ. ಅವರಿಗೆ ಚಿತ್ರ ತಲುಪಿಸಬೇಕು. ಹೇಗೆ ತಲುಪಿಸಬೇಕು ಎಂಬುದರ ಕುರಿತು ನನಗೆ ಕೆಲ ಯೋಚನೆಗಳಿದ್ದವು. ಹಾಗಾಗಿ, ನಾನೇ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾದೆ. ಸುಮಾರು 140 ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಟ್ರೇಲರ್ ಮತ್ತು ಹಾಡು ನೋಡಿ, ಕೆಲ ಚಿತ್ರಮಂದಿರದವರು ಕರೆದು ಚಿತ್ರ ಪ್ರದರ್ಶಿಸುವ ಅವಕಾಶ ಕೊಟ್ಟಿದ್ದಾರೆ. ಆಮೇಲೆ ನೋಡೋಣ ಎಂದು ಕಾಯದೇ ಮೊದಲ ದಿನವೇ ಬಂದು ಚಿತ್ರ ನೋಡಿ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.