ಕನ್ನಡ ಚಿತ್ರರಂಗದಲ್ಲಿ ಅಮೋಘ ಅಭಿನಯದೊಂದಿಗೆ ಅದ್ಭುತ ಕಂಠದಿಂದಲೂ ಜನಮನಸೂರೆಗೊಳಿಸಿರುವ ನಟ ವಸಿಷ್ಠ ಸಿಂಹ. ಇವರ ಲೇಟೆಸ್ಟ್ 'Love ಲಿ' ಸಿನಿಮಾ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದೆ. ಪ್ರಸ್ತುತ ರಾಜ್ಯದ 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಿದ್ದ ನಿರ್ಮಾಪಕರು, ಚಿತ್ರತಂಡದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ವಸಿಷ್ಠ ಸಿಂಹ, "ಜೂನ್ ತಿಂಗಳು ನಮಗೆ ಮಾರಕ ಎಂದರೆ ತಪ್ಪಾಗದು. ನಮ್ಮ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಒಂದಲ್ಲೊಂದು ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳ ನಡುವೆ ಚಿತ್ರ ತೆರೆಗೆ ಬಂದಿತ್ತು. ಚೇತನ್ ಕೇಶವ ತಮ್ಮ ಮೊದಲ ನಿರ್ದೇಶನದಲ್ಲೇ ಜನರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಚಿತ್ರ ನೋಡಿದವರು ಕಥೆ ಮೆಚ್ಚಿಕೊಂಡಿದ್ದಾರೆ. ನಾವು ನಿರೀಕ್ಷಿಸಿದಷ್ಟು ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲವೆಂಬ ಬೇಸರವಿದೆ. ಆದಾಗ್ಯೂ, 25 ದಿನಗಳನ್ನು ಪೂರೈಸಿದೆ. ದಯವಿಟ್ಟು ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ಈಗಾಗಲೇ ಚಿತ್ರ ವೀಕ್ಷಿಸಿರುವವರಿಗೆ ಧನ್ಯವಾದಗಳು. ನೋಡದೇ ಇರುವವರು ಈಗಲೇ ನೋಡಿ" ಎಂದು ಮನವಿ ಮಾಡಿದರು.
"ಮಫ್ತಿ ನಿರ್ದೇಶಕ ನರ್ತನ್, ಪ್ರಶಾಂತ್ ನೀಲ್ ಅಂಥವರ ಬಳಿ ಕೆಲಸ ಮಾಡಿ ಬಂದಿರುವ ನನಗಿದು ಮೊದಲ ನಿರ್ದೇಶನದ ಚಿತ್ರ. ಕನ್ನಡದಲ್ಲಿ ಒಂದೊಳ್ಳೆ ಕಂಟೆಂಟ್ ಆಧರಿಸಿದ ಚಿತ್ರವನ್ನು ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ಜನ ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡುತ್ತಿದ್ದು, ಬಹಳ ಖುಷಿಯಿದೆ. ಆದರೆ ಎಲ್ಲರೂ ಹೇಳಿದಂತೆ ನಿರೀಕ್ಷಿಸಿದಷ್ಟು ಜನರು ನಮ್ಮ ಚಿತ್ರ ನೋಡಿಲ್ಲ ಎಂಬ ಬೇಸರ ನನಗೂ ಇದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನರು ವೀಕ್ಷಿಸಿ ಪ್ರೋತ್ಸಾಹಿಸಿ" ಎಂಬುದು ನಿರ್ದೇಶಕ ಚೇತನ್ ಕೇಶವ್ ಮಾತು.