ಪಾರ್ವತಿಪುರಂ(ಆಂಧ್ರ ಪ್ರದೇಶ): ತಮ್ಮ ಹುದ್ದೆಯಿಂದ ನಿವೃತ್ತಿಯಾಗಲು ಇನ್ನೇನು 24 ಗಂಟೆಗಳು ಬಾಕಿ ಇರುವಾಗ ಮಹಿಳಾ ಅಧಿಕಾರಿಯೊಬ್ಬರು ವರ್ಗಾವಣೆಯಾಗಿ ಹೊಸ ಹುದ್ದೆಯ ಅಧಿಕಾರವಹಿಸಿಕೊಂಡಿದ್ದಾರೆ. ಇಂಥದ್ದೊಂದು ಬೆಳವಣಿಗೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದಲ್ಲಿ ಹೊಸದಾಗಿ ರಚನೆಯಾಗಿರುವ ಪಾರ್ವತಿಪುರಂ ಮನ್ಯಂ ಜಿಲ್ಲೆಯ ಎರಡನೇ ಹೆಚ್ಚುವರಿ ಎಸ್ಪಿಯಾಗಿ ಎಲ್.ನಾಗೇಶ್ವರಿ ಎಂಬವರು ಅಧಿಕಾರ ಸ್ವೀಕರಿಸಿದ್ದು, ಒಂದೇ ದಿನದಲ್ಲಿ ಹುದ್ದೆಯಿಂದ ನಿವೃತ್ತಿಯೂ ಆಗಲಿದ್ದಾರೆ. ಮತ್ತೊಂದು ವಿಶೇಷವೆಂದರೆ, ಇವರು 4ನೇ ತರಗತಿವರೆಗೆ ಓದಿದ ಇದೇ ಊರಿನಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದು ಭಾವಾನಾತ್ಮಕ ಘಳಿಗೆಯನ್ನು ಅನುಭವಿಸುತ್ತಿದ್ದಾರೆ.
ನಾಗೇಶ್ವರಿ 1989ರಲ್ಲಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದ್ದು, ಇತ್ತೀಚಿಗೆ ಡಿಎಸ್ಪಿಯಿಂದ ಹೆಚ್ಚುವರಿ ಎಸ್ಪಿಗೆ ಬಡ್ತಿ ಪಡೆದಿದ್ದರು. ಈ ನೇಮಕಾತಿಯನ್ನು ಅಧಿಕಾರಿಯ ನಿವೃತ್ತಿ ಸಮಯದ ಸೇವೆಯ ನಿಯಮದೊಂದಿಗೆ ಹೊಂದಿಕೆಯಾಗುವಂತೆ ನಡೆಸಲಾಗಿದೆ. ಗುರುವಾರ ಅಧಿಕೃತವಾಗಿ ಹೊಸ ಹುದ್ದೆಯ ಜವಾಬ್ದಾರಿವಹಿಸಿಕೊಂಡು ಕಡತಕ್ಕೆ ಸಹಿ ಹಾಕಿರುವ ಅವರು, ಶುಕ್ರವಾರ ಹುದ್ದೆಯಿಂದ ನಿವೃತ್ತಿಯಾಗಲಿದ್ದಾರೆ.
ನಾಗೇಶ್ವರಿ ಅನೇಕ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ಅಧಿಕಾರದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಪಾರ್ವತಿಪುರಂನ ಆರ್ಸಿಎಂ ಬಾಲಕಿಯರ ಶಾಲೆಯಲ್ಲಿ ಐದನೇ ತರಗತಿವರೆಗೆ ಓದಿದ ಇವರು ಬಳಿಕ ಬೊಬಿಲಿ ಸಿಬಿಎಂ ಶಾಲೆಯಲ್ಲಿ 10ನೇ ತರಗತಿಯವರೆಗೆ ಕಲಿತರು. ಆ ಬಳಿಕ ವಿಜಯನಗರಂನಲ್ಲಿ ಇಂಟರ್ಮೀಡಿಯೆಟ್ ಮತ್ತು ಪದವಿ ಶಿಕ್ಷಣ ಪಡೆದರು.
ಪೊಲೀಸ್ ಇಲಾಖೆಯಲ್ಲಿ ಇವರ ಸೇವಾ ವೃತ್ತಿ ಗಮನಾರ್ಹವಾಗಿದೆ. ಆಂಧ್ರ ಪ್ರದೇಶಕ್ಕೂ ಮುನ್ನ ತೆಲಂಗಾಣ ಪ್ರದೇಶದಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆಯಂತೆಯೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಇದೀಗ ನಿವೃತ್ತಿಯ ಘಟ್ಟ ತಲುಪಿದ್ದಾರೆ.
ಒಂದು ಸಂಪೂರ್ಣ ಚಕ್ರದಂತೆ, ತಮ್ಮ ಶಿಕ್ಷಣ ಆರಂಭವಾದ ಊರಿನಲ್ಲಿಯೇ ಇದೀಗ ನಾಗೇಶ್ವರಿ ನಿವೃತ್ತಿ ಹೊಂದುತ್ತಿರುವುದು ವಿಶೇಷ.
ಇದನ್ನೂ ಓದಿ: ಗುಪ್ತ ಅಥವಾ ನಕಲಿ ಖಾತೆ ತೆರೆದು ವಂಚಕರಿಗೆ ನೆರವು: ಕರ್ನಾಟಕದ ಇಬ್ಬರು ಬ್ಯಾಂಕ್ ಅಧಿಕಾರಿಗಳು ಸೇರಿ 52 ಜನರ ಬಂಧನ
ಇದನ್ನೂ ಓದಿ: ಭಾರತ ಶೀಘ್ರದಲ್ಲೇ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆ: ರಾಷ್ಟ್ರಪತಿ ಮುರ್ಮು