ಕನ್ನಡ ಚಿತ್ರರಂಗದ 'ಬುದ್ಧಿವಂತ' ಎಂದೇ ಖ್ಯಾತರಾಗಿರುವ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಯುಐ' (U I). ಕೆಜಿಎಫ್, ಕಾಂತಾರಗಳಂತಹ ಸಿನಿಮಾಗಳಿಂದ ಚಂದನವನದ ಕೀರ್ತಿ ದುಪ್ಪಟ್ಟಾಗಿರುವ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ಗಳ ಸಿನಿಮಾಗಳ ಮೇಲಿನ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಬುದ್ದಿವಂತನ ಸಿನಿಮಾ ಅಂದ್ಮೇಲೆ ವಿಶೇಷವಾಗಿ ಹೇಳಬೇಕಿನಿಸದು. ಯಾವಾಗ ಯುಐ ಸಿನಿಮಾ ತೆರೆಕಾಣಲಿದೆ ಎಂದು ಅಭಿಮಾನಿಗಳು ಕುತೂಹಲರಾಗಿದ್ದರು. ಇದೀಗ ಸ್ವತಃ ನಾಯಕ ನಟನೇ ವಿಭಿನ್ನ ಪೋಸ್ಟ್ ಮೂಲಕ ದಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ಉಪೇಂದ್ರ ತಮ್ಮ ವಿವಿಧ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಯುಐ ಪೋಸ್ಟರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಜೊತೆಗೆ, "ಇಷ್ಟ್ ದಿನ ಸಿನಿಮಾ ನೋಡಿ ನೀವ್ ಹಿಟ್, ಫ್ಲಾಪ್ ಅಂತ ಹೇಳ್ತಿದ್ರೀ, ಈ ಸಿನಿಮಾ ನಿಮ್ಮನ್ ನೋಡಿ…" ಎಂದು ಬರೆದುಕೊಂಡಿದ್ದಾರೆ. ಸಿನಿಮಾ ಮತ್ತು ತಮ್ಮ ಮಾತಿನ ಮೂಲಕ ಸದಾ ಅಭಿಮಾನಿಗಳ ತಲೆಗೆ ಹುಳ ಬಿಡುವ ನಟ ಇದೀಗ ತಮ್ಮ ಕ್ಯಾಪ್ಷನ್ ವಿಷಯದಲ್ಲೂ ಅದನ್ನೇ ಮಾಡಿದ್ದಾರೆ. ಸಿನಿಮಾ ವಿಶ್ವಾದ್ಯಂತ ಡಿಸೆಂಬರ್ 20ಕ್ಕೆ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಯುಐ, ಸ್ಯಾಂಡಲ್ವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಚಿತ್ರದಲ್ಲಿ ನಟಿಸೋ ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 7 ವರ್ಷಗಳ ಗ್ಯಾಪ್ ನಂತರ ಡೈರೆಕ್ಟರ್ ಚೇರ್ಗೆ ಮರಳಿರುವ ಚಿತ್ರವಿದು. ಉಪೇಂದ್ರ ಅವರ ಸಿನಿಮಾಗಳು ವಿಭಿನ್ನತೆಗೆ ಹೆಸರುವಾಸಿ. ಇದೀಗ ಅವರೇ ನಟಿಸಿ, ನಿರ್ದೇಶಿಸಿರೋ ಈ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು. ಈ ವರ್ಷಾಂತ್ಯ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿರಸಿಕರು ಉತ್ಸುಕರಾಗಿದ್ದಾರೆ.