ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ಚರಣ್ ಸೌತ್ ಸೂಪರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. 'ಆರ್ಆರ್ಆರ್' ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದವರು. ಇವರ ಪತ್ನಿ ಉಪಾಸನಾ ಕೊನಿಡೇಲಾ ಉದ್ಯಮಿ. ಇಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಮಾದರಿ ದಂಪತಿಯಾಗಿಯೂ ಜನಪ್ರಿಯರು. ಆಗಾಗ್ಗೆ ಸಂದರ್ಶನಗಳನ್ನು ನೀಡುವ ಉಪಾಸನಾ, ರಾಮ್ಚರಣ್ ಆನ್ಸ್ಕ್ರೀನ್ ರೊಮ್ಯಾನ್ಸ್ ಬಗೆಗೂ ಮಾತನಾಡಿದ್ದಾರೆ.
ರಾಮ್ ಚರಣ್ ಸಿನಿಮಾಗಳಲ್ಲಿ ನಟಿಯರೊಂದಿಗೆ ಆತ್ಮೀಯವಾಗಿ ಕಾಣಿಸಿಕೊಳ್ಳುವುದನ್ನು ನೋಡಲು ಮೊದಮೊದಲು ಕಷ್ಟವಾಗುತ್ತಿತ್ತು ಎಂಬುದನ್ನು ಉಪಾಸನಾ ಒಪ್ಪಿಕೊಂಡಿದ್ದಾರೆ. ಅಂದಹಾಗೆ ಇಬ್ಬರೂ ಇಬ್ಬರೂ ವೈವಿಧ್ಯಮಯ ಹಿನ್ನೆಲೆಯಿಂದ ಬಂದವರು. ಉಪಾಸನಾ ವೈದ್ಯರು ಮತ್ತು ಉದ್ಯಮಿಗಳೇ ಹೆಚ್ಚಿರುವ ಕುಟುಂಬದವರು. ರಾಮ್ ಚರಣ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ರಾಮ್ಚರಣ್ ವೃತ್ತಿಯ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ಉಪಾಸನಾರಿಗೆ ಮೊದಮೊದಲು ಸವಾಲಿನ ಸಂಗತಿಯಾಗಿತ್ತಂತೆ.
"ನಾಯಕಿಯರೊಂದಿಗೆ ಅಂತಹ ದೃಶ್ಯಗಳನ್ನು ಮಾಡಬೇಕೇ? ಎಂದು ನಾನು ರಾಮ್ ಅವರಲ್ಲಿ ಕೆಲವೊಮ್ಮೆ ಪ್ರಶ್ನಿಸಿದ್ದುಂಟು. ಕಮಾನ್, ಏನಿದು? ಎಂದು ಹೇಳುತ್ತಿದ್ದೆ'' ಎಂದು ಉಪಾಸನಾ ತಿಳಿಸಿದರು. 34ರ ಹರೆಯದ ಉಪಾಸನಾ, ಇಬ್ಬರೂ ವಿಭಿನ್ನ ವಾತಾವರಣದಲ್ಲಿ ಬೆಳೆದವರು ಎಂಬುದನ್ನು ಒತ್ತಿ ಹೇಳುತ್ತಾ, "ಆರಂಭದಲ್ಲಿ, ನನಗೆ ಅರ್ಥವಾಗುತ್ತಿರಲಿಲ್ಲ. ನಾವು ವಿಭಿನ್ನ ವಾತಾವರಣದಲ್ಲಿ ಬೆಳೆದವರು. ನನ್ನೊಂದಿಗೆ ಅವರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ'' ಎಂದು ತಿಳಿಸಿದರು.
"ರಾಮ್ ಚರಣ್ ವೃತ್ತಿಜೀವನದ ಕೆಲವು ಅಂಶಗಳೊಂದಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಅಂತಹ ದೃಶ್ಯಗಳ ಅಗತ್ಯತೆಯ ಬಗ್ಗೆ ಪ್ರಶ್ನಿಸುತ್ತಿದ್ದೆ. ಹೀಗೆ ರಾಮ್ ಅವರಲ್ಲಿ ನನ್ನ ಕಳವಳ ವ್ಯಕ್ತಪಡಿಸುತ್ತಿದ್ದೆ. ಆಗ ಅವರು ತಾಳ್ಮೆಯಿಂದ ಚಿತ್ರರಂಗದ ವಿಚಾರಗಳನ್ನು ನನಗೆ ವಿವರಿಸುತ್ತಿದ್ದರು. ಈ ಮೂಲಕ ನನ್ನ ಕಳವಳಗಳನ್ನು ದೂರ ಮಾಡಿದರು" ಎಂದರು.