ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ ರಾಜು ವಿರುದ್ಧ ನಟಿ ತ್ರಿಶಾ ಕೃಷ್ಣನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇಂದು (ಗುರುವಾರ, ಫೆಬ್ರವರಿ 22) ನಟಿ ತ್ರಿಶಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ, ಗಮನ ಸೆಳೆಯೋ ನಿಟ್ಟಿನಲ್ಲಿ ಇತಿ-ಮಿತಿ ಮೀರಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಟಿ ತ್ರಿಶಾ ತಮ್ಮ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ತಮ್ಮ ಕಾನೂನು ತಂಡ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದರು.
ಈ ಹಿಂದೆ, ತ್ರಿಶಾ ಸಾಮಾಜಿಕ ಮಾಧ್ಯಮದಲ್ಲಿ ಎ.ವಿ ರಾಜು ಅವರನ್ನು ಟೀಕಿಸಿ ಪೋಸ್ಟ್ ಶೇರ್ ಮಾಡಿದ್ದರು. ಅಟೆಂಕ್ಷನ್ಗಾಗಿ ಇಂತಹ ಕೃತ್ಯದಲ್ಲಿ ತೊಡಗಿರುವುದಾಗಿ ಆರೋಪಿಸಿ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮ್ಮ ಲೀಗಲ್ ಟೀಮ್ ಈ ವಿಷಯದ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತದೆ. ಮುಂದಿನ ಯಾವುದೇ ಕ್ರಮವು ಕಾನೂನು ಇಲಾಖೆಯಿಂದ ನೇರವಾಗಿ ಬರುತ್ತದೆ ಎಂದು ಉಲ್ಲೇಖಿಸಿದ್ದರು.
ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ನಟಿ ತ್ರಿಶಾ ಕೃಷ್ಣನ್ ಬಗ್ಗೆ ರಾಜು ಅವರು ಕಾಮೆಂಟ್ ಮಾಡಿದ್ದು, ಅವುಗಳು ಬಹಳ ಅನುಚಿತವಾಗಿವೆ ಎಂದು ಬಹುತೇಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿವೆ. ಪಕ್ಷದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೆಬ್ರವರಿ 17 ರಂದು ಎ.ವಿ ರಾಜು ಅವರನ್ನು ಎಐಎಡಿಎಂಕೆಯಿಂದ ವಜಾಗೊಳಿಸಲಾಗಿದೆ.