ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚೆಲುವೆಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರು ಸೇರಿದಂತೆ ಅಭಿಮಾನಿಗಳಿಂದ ಅಪಾರ ಸಂಖ್ಯೆಯ ಶುಭಾಶಯಗಳ ಸಂದೇಶ ಹರಿದುಬಂದಿದೆ. 'ಸೌತ್ ಕ್ವೀನ್'ನ ಈ ವಿಶೇಷ ದಿನಕ್ಕೆ ಅವರ ಅಭಿಮಾನಿಗಳು, ಹಿತೈಷಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಚೆಲುವೆಯ ಫೋಟೋ-ವಿಡಿಯೋಗಳು, ಸಿನಿ ಸಾಧನೆಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ 'ವಿಶ್ವಂಭರ'ದ ನಿರ್ಮಾಪಕರು ತ್ರಿಶಾ ಅವರ ಪೋಸ್ಟರ್ ಅನ್ನು ಹಂಚಿಕೊಂಡು, ನಟಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಹಿಂದಿರುವ ನಿರ್ಮಾಣ ಸಂಸ್ಥೆ 'ಯುವಿ ಕ್ರಿಯೇಷನ್ಸ್' ತ್ರಿಶಾ ಅವರ ಸುಂದರ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ಪೋಸ್ಟರ್‌ನಲ್ಲಿ, ಸಾಂಪ್ರದಾಯಿಕ ಕೆಂಪು ಲೆಹೆಂಗಾ ಮತ್ತು ಡೈಮಂಡ್ ನೆಕ್ಲೇಸ್ ಧರಿಸಿ ತ್ರಿಶಾ ಬೆಡಗು ಬಿನ್ನಾಣ ಪ್ರದರ್ಶಿಸಿದ್ದಾರೆ. ನಟಿಯ ನಗು ಎಲ್ಲರ ಮನಮುಟ್ಟುವಂತಿದೆ. ಪೋಸ್ಟರ್ ಹಂಚಿಕೊಂಡ ಚಲನಚಿತ್ರ ನಿರ್ಮಾಣ ಸಂಸ್ಥೆ, "ಚೆಲುವೆ ತ್ರಿಶಾ ಕೃಷ್ಣನ್ ಅವರಿಗೆ ವಿಶ್ವಂಭರ ತಂಡದಿಂದ ಜನ್ಮದಿನದ ಶುಭಾಶಯಗಳು. ಸಿನಿಮಾ 2025ರ ಜನವರಿ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದೆ. ತ್ರಿಶಾ ಪೋಸ್ಟರ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ತಮ್ಮ ಈ ವಿಶೇಷ ದಿನದಂದು ತ್ರಿಶಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ಜನ್ಮದಿನದ ಶುಭಾಶಯಗಳನ್ನು ಕೋರುತ್ತಿರುವ ಮಕ್ಕಳ ರೀಲ್ ಒಂದನ್ನು ಶೇರ್ ಮಾಡಿದ್ದಾರೆ. ತ್ರಿಶಾ ಅವರ ಫ್ಯಾನ್ ಪೇಜ್ ಒಂದು ಹಂಚಿಕೊಂಡಿರುವ ರೀಲ್ನಲ್ಲಿ, ಮಕ್ಕಳು ತ್ರಿಶಾ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದನ್ನು ಪ್ರದರ್ಶಿಸಿದೆ. ವಿಡಿಯೋದಲ್ಲಿ, ಮಕ್ಕಳಿಗೆ ಆಹಾರ ಪೂರೈಸಿರುವುದನ್ನು ಸಹ ಕಾಣಬಹುದು.