ಕೆಜಿಎಫ್ ಎಂಬ ಬ್ಲಾಕ್ಬಸ್ಟರ್ ಸಿನಿಮಾದಲ್ಲಿನ ಅಮೋಘ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದ ಕೀರ್ತಿ ಹೆಚ್ಚಿಸಿರುವ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಅವರ ಮುಂದಿನ ಪ್ರಾಜೆಕ್ಟ್ ಸುತ್ತ ಹಲವು ಅಂತೆಕಂತೆಗಳಿವೆ. 2023ರ ಕೊನೆಗೆ ಚಿತ್ರತಂಡ ನಾಯಕ ನಟ, ನಿರ್ಮಾಪಕರು, ನಿರ್ದೇಶಕರ ಘೋಷಣೆ ಜೊತೆ ಸಿನಿಮಾ ಅನೌನ್ಸ್ಮೆಂಟ್ ವಿಡಿಯೋ ಅನಾವರಣಗೊಳಿಸಿದ್ದು ಬಿಟ್ಟರೆ ಪ್ರೊಜೆಕ್ಟ್ ಕುರಿತು ಹೆಚ್ಚಿನ ವಿಷಯ ಬಿಟ್ಟುಕೊಟ್ಟಿಲ್ಲ.
ಆದರೆ ಸಿನಿಮಾ ಸುತ್ತ ಹಲವು ರೀತಿಯ ಗುಲ್ಲೆದ್ದಿರುವುದು ನಿಮಗೆ ತಿಳಿದಿರುವ ವಿಚಾರವೇ. 'ಟಾಕ್ಸಿಕ್' ಜೊತೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಕರೀನಾ ಕಪೂರ್ ಖಾನ್, ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್ ಅವರುಗಳ ಹೆಸರು ಕೇಳಿಬರುತ್ತಿದೆ. ಈ ವಿಚಾರಗಳ ನಡುವೆಯೇ ಚಿತ್ರದ ನಿರ್ಮಾಪಕರು ಪ್ರೇಕ್ಷಕರಲ್ಲಿ ಊಹೆಗಳಿಂದ ದೂರವಿರುವಂತೆ ಕೇಳಿಕೊಂಡಿದ್ದಾರೆ.
"ಟಾಕ್ಸಿಕ್ ಕಾಸ್ಟ್ ಬಗ್ಗೆ ಅನೇಕ ಆಧಾರರಹಿತ ಮಾಹಿತಿಗಳು ಹರಿದಾಡುತ್ತಿವೆ. ಟಾಕ್ಸಿಕ್ ಸುತ್ತಲಿರುವ ಉತ್ಸಾಹವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ಆದರೆ ಪ್ರಸ್ತುತ ಊಹಾಪೋಹಗಳಿಂದ ದೂರವಿರಲು ನಾವು ನಿಮ್ಮೆಲ್ಲರಲ್ಲಿಯೂ ವಿನಂತಿಸುತ್ತೇವೆ. ಸಿನಿಮಾದ ಕಾಸ್ಟಿಂಗ್ ಪ್ರೊಸೆಸ್ ಪೂರ್ಣಗೊಳ್ಳುವ ಹಂತದಲ್ಲಿದೆ. ನಾವು ಹೊಂದಿರುವ ತಂಡದಿಂದ ಸಖತ್ ಥ್ರಿಲ್ ಆಗಿದ್ದೇವೆ. ಕಥೆಯನ್ನು ಜೀವಂತಗೊಳಿಸಲು ಸಜ್ಜಾಗುತ್ತಿದ್ದು, ಅಧಿಕೃತ ಮಾಹಿತಿಗಾಗಿ ಕಾಯಲು ನಾವು ನಿಮ್ಮೆಲ್ಲರಲ್ಲೂ ವಿನಂತಿಸುತ್ತೇವೆ" ಎಂದು ಚಿತ್ರತಯಾರಕರು ತಿಳಿಸಿದ್ದಾರೆ.