'ಕೆಜಿಎಫ್' ಫ್ರ್ಯಾಂಚೈಸಿ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ಯಶ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿರುವಂತೆ ತೋರುತ್ತಿದೆ. ಅಷ್ಟರ ಮಟ್ಟಿಗೆ ನಿರ್ಮಾಣಗೊಳ್ಳುತ್ತಿದೆ ಈ ಸಿನಿಮಾ. ಬಿಗ್ ಬಜೆಟ್ ಪ್ರಾಜೆಕ್ಟ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ದೀರ್ಘಾವಧಿಯ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಮನರಂಜನಾ ಮಾಧ್ಯಮವೊಂದು ಈ ವಿಷಯವನ್ನು ಖಚಿತಪಡಿಸಿದೆ. ಹೌದು, ಭಾರತೀಯ ಹಾಗೂ ಗ್ಲೋಬಲ್ ಆಡಿಯನ್ಸ್ಗೆ ಕನೆಕ್ಟ್ ಆಗುವ ರೀತಿ ಚಿತ್ರದ ನಿರೂಪಣೆಯನ್ನು ರಚಿಸಲಾಗಿದೆ ಎಂದು ಟಾಕ್ಸಿಕ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಗೀತು ಮೋಹನ್ ದಾಸ್ ತಿಳಿಸಿದ್ದಾರೆ. ಕೆಜಿಎಫ್ ಮೂಲಕ ವಿಶ್ವದಾದ್ಯಂತ ಸಖತ್ ಸದ್ದು ಮಾಡಿ ಜಾಗತಿಕ ಮಟ್ಟದಲ್ಲೂ ಅಭಿಮಾನಿಗಳನ್ನು ಸಂಪಾದಿಸಿರುವ ಯಶ್ ಅವರ ಯಶಸ್ಸನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಸಿನಿಮಾ ಇದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪೋದು ಚಿತ್ರತಂಡದ ಪ್ರಮುಖ ಧ್ಯೇಯವಾಗಿದೆ. ಮನರಂಜನೆ ಒದಗಿಸುವುದು ಮಾತ್ರವಲ್ಲದೇ ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯದೊಂದಿಗೆ ಸಂಪರ್ಕ ಸಾಧಿಸುವ ಕಥೆಯನ್ನು ರಚಿಸುತ್ತಿದ್ದೇವೆ ಎಂದು ಸಹ ನಿರ್ದೇಶಕರು ತಿಳಿಸಿದ್ದಾರೆ.
ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ರಾಕಿಂಗ್ ಸ್ಟಾರ್ ಹಾಗೂ ವೆಂಕಟ್ ಕೆ ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿರುವ ಈ ಚಿತ್ರ ಕನ್ನಡ, ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಚಿತ್ರ ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.
ಭಾರತದ ಖ್ಯಾತ ಸಿನಿಮಾ ವಿಮರ್ಷಕ ತರಣ್ ಆದರ್ಶ್ ಪೋಸ್ಟ್ ಶೇರ್ ಮಾಡಿ, "ಇದು ಅಧಿಕೃತ. ಯಶ್ ಅವರ ಮುಂದಿನ ಚಿತ್ರ 'ಟಾಕ್ಸಿಕ್' ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಏಕಕಾಲದಲ್ಲಿ ಪರಿಕಲ್ಪನೆ, ಬರವಣಿಗೆ ಮತ್ತು ಚಿತ್ರೀಕರಣಗೊಂಡ ಮೊದಲ ಭಾರತೀಯ ಚಲನಚಿತ್ರವಾಗಿದ್ದು, ಜಾಗತಿಕ ಮಟ್ಟದಲ್ಲಿ ಒಂದೊಳ್ಳೆ ಸಿನಿ ಅನುಭವಕ್ಕೆ ದಾರಿ ಮಾಡಿಕೊಡಲಿದೆ. ಈ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುವುದು. ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾವನ್ನು ವೆಂಕಟ್ ಕೆ ನಾರಾಯಣ್ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.