'ದೇವರ' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ದಕ್ಷಿಣ ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಗಾಯಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಜಿಮ್‌ನಲ್ಲಿದ್ದ ಸಂದರ್ಭದಲ್ಲಿ ಎಡಗೈ ಮಣಿಕಟ್ಟು ಸಣ್ಣ ಮಟ್ಟದಲ್ಲಿ ಉಳುಕಿದೆ. ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಗಾಯದ ನಡುವೆಯೂ ಜೂ.ಎನ್‌ಟಿಆರ್ ನಿನ್ನೆ ರಾತ್ರಿ 'ದೇವರ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ನಟ ಶೀಘ್ರದಲ್ಲೇ ಕೆಲಸಕ್ಕೆ ಮರಳಲಿದ್ದಾರೆ ಎಂದು ಜೂ.ಎನ್‌ಟಿಆರ್ ಅವರ ಕಚೇರಿಯಿಂದ ಹೇಳಿಕೆ ಹೊರಡಿಸಲಾಗಿದೆ.
ಟಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟನನ್ನು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಯಂಗ್ ಟೈಗರ್ ಅಂತಾ ಕರೆಯೋದುಂಟು. ಇತ್ತೀಚಿನ ದಿನಗಳಲ್ಲಿ 'ದೇವರ' ಸಿನಿಮಾ ಸಲುವಾಗಿ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿರುವ ಇವರು ತಮ್ಮ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಆರ್‌ಆರ್‌ಆರ್ ಮೂಲಕ ವಿಶ್ವದಾದ್ಯಂತದ ಸಿನಿಪ್ರಿಯರ ಗಮನ ಸೆಳೆದಿರುವ ಇವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ. ಆದ್ರೆ ಇತ್ತೀಚೆಗೆ ಗಾಯಗೊಂಡಿದ್ದಾರೆ ಎಂಬ ಸುದ್ದಿ ಅವರ ತಂಡದಿಂದ ಬಂದಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಕೈ ಉಳುಕಿದೆ. ಮುನ್ನೆಚ್ಚರಿಕೆಯಾಗಿ ಪ್ಲಾಸ್ಟರ್ ಬಳಸಲು ನಟನಿಗೆ ಸೂಚಿಸಲಾಯಿತು. ಗಾಯದ ಹೊರತಾಗಿಯೂ ತಮ್ಮ ಶೂಟಿಂಗ್ ಅನ್ನು ಮುಂದುವರೆಸಿದರು. ಅದರಂತೆ ತಮ್ಮ ದೇವರಾ ಚಿತ್ರೀಕರಣವನ್ನು ನಿನ್ನೆ ರಾತ್ರಿ ಪೂರ್ಣಗೊಳಿಸಿದ್ದಾರೆ. ನಟ ಸಿನಿಮಾಗೆ ತಮ್ಮನ್ನು ಎಷ್ಟು ಸಮರ್ಪಿಸಿಕೊಂಡಿದ್ದಾರೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.