ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತ್ಡೇ ಅಂಗವಾಗಿ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಅಭಿಮಾನಿಗಳಿಗಿದು ಸ್ಪೆಷಲ್ ಟ್ರೀಟ್ ಅಂತಲೇ ಹೇಳಬಹುದು.
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಗ್ಲಿಂಪ್ಸ್ನಲ್ಲಿ ನಾನಾ ವಿಷಯಗಳನ್ನು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ಅನ್ನು ವಿಡಿಯೋದಲ್ಲಿ ತೋರಿಸಿರುವ ಅವರು ಭವಿಷ್ಯದ ಕಥೆ ಹೇಳಲು ಹೊರಟ್ಟಿದ್ದಾರೆ. 'Once Upon A Time in 2209 AD' ಎಂದು ಶುರುವಾಗುವ ಝಲಕ್ ಬಹಳ ಕುತೂಹಲಕಾರಿಯಾಗಿದೆ. ಕಥೆ ಏನಿರಬಹುದು ? ಅನೂಪ್ ಹೇಳಲೊರಟಿರುವ ಭವಿಷ್ಯದ ಕಥಾ ಹಂದರವೇನು? ಎಂಬ ಕುತೂಹಲ ನೋಡುಗನಲ್ಲಿದೆ.
ಸುದೀಪ್ ಅವರೇ ಹೇಳಿಕೊಂಡಿರುವಂತೆ 'ಬಿಲ್ಲ ರಂಗ ಭಾಷಾ' ಅವರ ಸಿನಿಕರಿಯರ್ನ ಬಿಗ್ ಬಜೆಟ್ ಚಿತ್ರ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಹನುಮಾನ್'ನ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅವರು ಸೂಪ್ ಮುಖ್ಯಭೂಮಿಕೆಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ವಿಡಿಯೋ ಅಭಿಮಾನಿಗಳು "ಅಪ್ಡೇಟ್ ಬೇಕು ಬಾಸ್" ಎಂದು ಹೇಳುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ. "ಬಾಸ್ ಅಪ್ಡೇಟ್ ಬಾಸ್", "ಅಪ್ಡೇಟ್ ಬೇಕು ಬಾಸ್" ಎಂಬೆಲ್ಲಾ ಧ್ವನಿ ಕೇಳುತ್ತಿದೆ. ಇದನ್ನು ನಟ ಕೇಳಿಸಿಕೊಳ್ಳುತ್ತಿರುವಂತೆ ಚಿತ್ರಿಸಲಾಗಿದೆ. ತಕ್ಷಣ ವಿಡಿಯೋದಲ್ಲಿ ಅನೂಪ್ ಭಂಡಾರಿ ಅವರು ಪುಸ್ತಕ ಓದುವಂತೆ ಕಾಣಿಸಿಕೊಳ್ಳುತ್ತಾರೆ. ನಂತರ ಆ ಪುಸ್ತಕದಲ್ಲಿ 'ಬಿಲ್ಲ ರಂಗ ಭಾಷಾ' ತಂಡದ ಕುರಿತು ವಿವರ ದೊರಕುತ್ತದೆ. "ಹನುಮಾನ್ ನಿರ್ಮಾಪಕರಿಂದ, ರಂಗಿತರಂಗ, ರಾಜರಥ, ವಿಕ್ರಾಂತ್ ರೋಣ ನಿರ್ದೇಶಕರಿಂದ ಬಿಲ್ಲ ರಂಗ ಭಾಷಾ ಸಿನಿಮಾ" ಬರಲಿದೆ ಎಂಬ ಅಂಶಗಳನ್ನು ಈ ವಿಡಿಯೋ ಒಳಗೊಂಡಿದೆ.