ನವೆಂಬರ್ 1ರಿಂದ ಎಲ್ಲ ಸಿನಿಮಾ ನಿರ್ಮಾಣ ಕೆಲಸಗಳನ್ನು ಸ್ಥಗಿತಗೊಳಿಸುವಂತೆ ತಮಿಳು ಚಲನಚಿತ್ರ ಸಂಘಗಳಿಗೆ ಒತ್ತಾಯಿಸಿ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಸೋಮವಾರ ನೋಟಿಸ್ ಜಾರಿ ಮಾಡಿದೆ. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಮೂಲ ವೆಚ್ಚಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ನಿರ್ಧಾರದ ಜೊತೆಗೆ, ಹಲವಾರು ನಿರ್ಮಾಪಕರಿಂದ ಮುಂಗಡ ಪಾವತಿ ಪಡೆದಿದ್ದರೂ ಕೂಡಾ, ಸಿನಿಮಾ ಪ್ರಾರಂಭಿಸಲು ವಿಫಲವಾದ ಹಿನ್ನೆಲೆ ಸೂಪರ್ ಸ್ಟಾರ್ ಧನುಷ್ ಮೇಲೆ ನಿಷೇಧ ಹೇರಲು ಟಿಎಫ್‌ಪಿಸಿ ನಿರ್ಧರಿಸಿದೆ.
ಟಿಎಫ್‌ಪಿಸಿ ಕ್ರಮಗಳಿಗೆ ನಟರ ಸಂಘ 'ನಾಡಿಗರ್ ಸಂಗಮ್' (Nadigar Sangam) ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ತಿ, ಕರುಣಾಸ್, ಪೂಚಿ ಮುರುಗನ್ ಸೇರಿದಂತೆ ನಾಡಿಗರ್ ಸಂಗಮ್ನ ಪ್ರಮುಖರು ಸಂಘದ ಪರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ನಿರ್ಧಾರಕ್ಕೆ ಬರುವ ಮೊದಲು 'ಟಿಎಫ್‌ಪಿಸಿ'ಯು ನಾಡಿಗರ್ ಸಂಗಮ್ ಅಥವಾ ಸದಸ್ಯರನ್ನು ಸಂಪರ್ಕಿಸಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಟ ಕಾರ್ತಿ, ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ನಡುವಿನ ಸಹಯೋಗದ ಸಂಬಂಧವನ್ನು ಒತ್ತಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಾಮಾನ್ಯವಾಗಿ, ನಟ ಅಥವಾ ನಿರ್ಮಾಪಕರ ವಿರುದ್ಧ ದೂರು ನೀಡುವಾಗ ಟಿಎಫ್‌ಪಿಸಿ ಮತ್ತು ನಾಡಿಗರ್ ಸಂಗಮ್ ಪರಸ್ಪರ ಒಪ್ಪಂದಕ್ಕೆ ಬರುತ್ತವೆ. ಆದರೆ, ಧನುಷ್ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಅವರನ್ನು ನಿಷೇಧಿಸುವಂತಹ ಹಠಾತ್ ನಿರ್ಧಾರ ಸ್ವೀಕಾರಾರ್ಹವಲ್ಲ. ನಾವು ಟಿಎಫ್‌ಪಿಸಿಯ ಹೇಳಿಕೆಯನ್ನು ಖಂಡಿಸುತ್ತೇವೆ. ಎಲ್ಲ ತಮಿಳು ಚಲನಚಿತ್ರ ಸಂಘಗಳು ಭೇಟಿಯಾಗಿ, ಪರಸ್ಪರ ಒಪ್ಪಂದಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.