ಕನ್ನಡ ಚಿತ್ರರಂಗದಲ್ಲಿ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ 'ಕರ್ಕಿ' ತೆರೆಗೆ ಬರಲು ಭರದ ಸಿದ್ಧತೆ ನಡೆಸುತ್ತಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಅನ್ನು ಇತ್ತೀಚೆಗೆ ಚಿತ್ರತಂಡ ಅನಾವರಣಗೊಳಿಸಿದೆ. ಕಾರ್ಯಕ್ರಮದಲ್ಲಿ ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿತು.
ಮೊದಲಿಗೆ ಕರ್ಕಿ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ''ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್ ಕರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿವೆ. ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆಯಲು ನನಗೆ ಅವಕಾಶ ಸಿಕ್ಕಿದೆ. ಪವಿತ್ರನ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನಗೂ ಹೊಸ ಅನುಭವ ನೀಡಿದೆ. ಪ್ರತೀ ಹಾಡಿನ ಒಂದೊಂದು ಪದವನ್ನೂ ಕೂಡಾ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ಕರ್ಕಿ ನೋಡುಗರಿಗೆ ಹೊಸ ಅನುಭವ ಕೊಡಲಿದೆ'' ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ, ಜಯಪ್ರಕಾಶ್ (ಜೆ.ಪಿ) ರೆಡ್ಡಿ ಈಗಾಗಲೇ ವಾಟ್ಸ್‌ಆ್ಯಪ್ ಲವ್, ರಾಜರಾಣಿ ಸೇರಿದಂತೆ ಕೆಲ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲೂ ಕೂಡಾ ಕಾನೂನು ಪದವೀಧರನಾಗಬೇಕೆಂಬ ಕನಸು ಇಟ್ಟುಕೊಂಡ ಹಳ್ಳಿ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ಜಯಪ್ರಕಾಶ್ ರೆಡ್ಡಿ, "ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ ನಿರ್ವಹಿಸಿದ್ದೇನೆ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಈ ಚಿತ್ರದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಸಿನಿಮಾ ಸಾಗುತ್ತದೆ. ಆದಷ್ಟು ನೈಜವಾಗಿ ಕಥೆ, ಪಾತ್ರಗಳು ಮೂಡಿಬಂದಿದೆ" ಎಂದು ತಿಳಿಸಿದರು.
"ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ ಕರ್ಕಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಬಗ್ಗೆ ಮಾತನಾಡಿದ ಪ್ರಕಾಶ್ ಪಳನಿ, ಕಥೆ ಇಷ್ಟವಾಗಿ ಈ ಸಿನಿಮಾ ನಿರ್ಮಿಸಲು ಮುಂದಾದೆ. ಈ ಚಿತ್ರವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನಿಮಾವನ್ನು ನಿರ್ದೇಶಿಸಿದರು. ಅವರ ನಿರ್ದೇಶನದಲ್ಲಿ ಕರ್ಕಿ ಬಹಳ ಚೆನ್ನಾಗಿ ಮೂಡಿಬಂದಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.