ಫ್ರಾನ್ಸ್‌ನ ಕೇನ್ಸ್‌ನಲ್ಲಿ ನಡೆಯುವ ಚಲನಚಿತ್ರೋತ್ಸವ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಐಶ್ವರ್ಯಾ ರೈ ಬಚ್ಚನ್ ಸೇರಿ ಹಲವರು ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಗುರುವಾರ ಇದೇ ಚಿತ್ರೋತ್ಸವದಲ್ಲಿ ಭಾರತ ದೊಡ್ಡ ಮಟ್ಟದ ಗೆಲುವು ಕಂಡಿದೆ. ಲಾ ಸಿನೆಫ್ನಲ್ಲಿ ಮೈಸೂರಿನ ಚಿದಾನಂದ ಅವರ 'ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ' (Sunflowers Were The First Ones to Know) ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡ ಎಫ್‌ಟಿಐಐ (Film and Television Institute of India) 'ಎಫ್‌ಟಿಐಐ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ. ನಮ್ಮ ವಿದ್ಯಾರ್ಥಿಯ ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ 77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಪ್ರಶಸ್ತಿ ಗೆದ್ದಿದೆ. ವಿದ್ಯಾರ್ಥಿ ನಿರ್ದೇಶಕ ಚಿದಾನಂದ ಎಸ್.ನಾಯಕ್ ಮೇ 23ರಂದು ಕೇನ್ಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದರು' ಎಂದು ಬರೆದುಕೊಂಡಿದೆ.
ಮಾನ್ಸಿ ಮಹೇಶ್ವರಿ ನಿರ್ದೇಶನದ 'ಬನ್ನಿಹುಡ್' ಎಂಬ ಅನಿಮೇಟೆಡ್ ಚಿತ್ರ ಲಾ ಸಿನೆಫ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿತು. ಎನ್ಐಎಫ್ಟಿ-ದೆಹಲಿಯ ಮಾಜಿ ವಿದ್ಯಾರ್ಥಿನಿ ಹಾಗೂ ಮೀರತ್ ಮೂಲದ ಮಾನ್ಸಿ ಮಹೇಶ್ವರಿ ಅವರು ಯುಕೆಯ ನ್ಯಾಷನಲ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸ್ಕೂಲ್ನಲ್ಲಿರುವಾಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ, ಗ್ರೀಸ್‌ನ ಥೆಸ್ಸಲೋನಿಕಿಯ ಅರಿಸ್ಟಾಟಲ್ ಯೂನಿವರ್ಸಿಟಿಯ ನಿಕೋಸ್ ಕೊಲಿಯೊಕೋಸ್ ನಿರ್ದೇಶನದ 'ದಿ ಚಾಓಸ್ ಶಿ ಲೆಫ್ಟ್ ಬಿಹೈಂಡ್' ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಆಸ್ಯಾ ಸೆಗಾಲೊವಿಚ್ ಅವರ 'ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್' ಎರಡನೇ ಸ್ಥಾನ ಹಂಚಿಕೊಂಡಿದೆ.