ಸುದೀಪ್. ಚಂದನವನ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಸೂಪರ್ ಸ್ಟಾರ್. ಅಭಿನಯ ಚಕ್ರವರ್ತಿ ಎಂಬ ಬಿರುದೇ ಸಾಕು ಇವರ ಮುನ್ನುಡಿಗೆ. ಕರುನಾಡಿನಲ್ಲಿ ಮನೆ ಮನೆ ಮಾತಾಗಿರುವ ಇವರ ವರ್ಚಸ್ಸು ವರ್ಣನಾತೀತ. ಅಭಿಮಾನಿ ಬಳಗ ಕೂಡಾ ಲೆಕ್ಕಕ್ಕೆ ಸಿಗದಷ್ಟಿದೆ. ಹೀಗೆ, ತಮ್ಮ ನಡೆ, ನುಡಿ, ನಟನಾ ಪ್ರತಿಭೆ ಮೂಲಕ ಸದಾ ಚರ್ಚೆಯ ವಿಷಯವಾಗಿರುವ ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 29 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮನದುಂಬಿ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಎಕ್ಸ್ ಪೋಸ್ಟ್: ''29 ವರ್ಷಗಳು, ನನ್ನೀ ಪ್ರಯಾಣಕ್ಕೆ ಕೃತಜ್ಞನಾಗಿದ್ದೇನೆ. ಪ್ರೇಕ್ಷಕರನ್ನು ಮನರಂಜಿಸುವುದು ಮತ್ತು ಅನೇಕರೊಂದಿಗೆ ಪ್ರತಿಧ್ವನಿಸುವ ಕಥೆಗಳನ್ನು ಹಂಚಿಕೊಳ್ಳುವುದು ಒಂದು ಗೌರವಕರ ಕ್ಷಣ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲವು ನಿರಂತರ ಪ್ರೇರಣೆಯ ಮೂಲ. ನನ್ನ ಕೆಲಸ ಅಂಥ ಸಮರ್ಪಿತ ಅಭಿಮಾನಿಗಳನ್ನು ಹೊಂದಿರುವುದು ನಿಜವಾಗಿಯೂ ಸೌಭಾಗ್ಯ. ನಿಮ್ಮ ಅಚಲ ಪ್ರೋತ್ಸಾಹ ಪ್ರತೀ ಸವಾಲನ್ನು ಸಾರ್ಥಕಗೊಳಿಸಿದೆ. ಅದು ನನಗೆ ಎಷ್ಟು ಅರ್ಥಪೂರ್ಣ ಎಂಬುದನ್ನು ವ್ಯಕ್ತಪಡಿಸಲು ಪದಗಳಿಲ್ಲ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಹೃದಯತುಂಬಿ "ಧನ್ಯವಾದಗಳು" ಎಂದು ನಾನು ಹೇಳಬಲ್ಲೆ'' ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಏರಿಳಿತ ಕಂಡೇ ಶಿಖರ ಏರಿದ ಪ್ರತಿಭೆ: 1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಲ್ಲಿ 'ಬ್ರಹ್ಮ' ಸಿನಿಮಾ ಮೂಲಕ ಸುದೀಪ್ ಸಿನಿಪಯಣ ಶುರುವಾಯಿತು. ಬ್ರಹ್ಮ ಸಿನಿಮಾದಲ್ಲಿ ಕೆಲಸ ಮಾಡಿದ್ರೂ ಆ ಪ್ರಾಜೆಕ್ಟ್ ಪೂರ್ಣಗೊಳ್ಳಲಿಲ್ಲ. ನಂತರ ತಾಯವ್ವ ಸಿನಿಮಾ ಬಿಡುಗಡೆ ಆಯಿತು. ಇನ್ನೊಂದು ವರ್ಷ ಕಳೆದರೆ ಸುದೀಪ್ ಸಿನಿರಂಗದಲ್ಲಿ 3 ದಶಕ ಪೂರೈಸಲಿದ್ದಾರೆ. ಇವರ ಸಿನಿಪಯಣವೇನೂ ಅಷ್ಟು ಸುಲಭವಿರಲಿಲ್ಲ. ಏರಿಳಿತ ಕಂಡೇ ಶಿಖರ ಏರಿದ ಪ್ರತಿಭೆ. ತಮ್ಮ ಅಮೋಘ ಅಭಿನಯ, ವಾಕ್ಚಾತುರ್ಯ, ಸಮಾಜ ಸೇವೆ, ವರ್ಚಸ್ಸಿನಿಂದ ಕೋಟ್ಯಂತರ ಕಟ್ಟಾ ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿ ಆಗಿದ್ದಾರೆ ಕಿಚ್ಚ.
ನಟನೆ ಮಾತ್ರವಲ್ಲ....: ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಸ್ಕ್ರೀನ್ರೈಟರ್, ನಿರೂಪಕ, ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ಲಾಕ್ಬಸ್ಟರ್ ಸಿನಿಮಾಗಳ ಜೊತೆಗೆ ಬಿಗ್ ಬಾಸ್ ಸಾರಥಿ ಎಂದೇ ಜನಪ್ರಿಯರಾಗಿದ್ದಾರೆ. 29 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಒದಗಿಸುತ್ತಾ ಬಂದಿರುವ ಅಭಿನಯ ಚಕ್ರವರ್ತಿ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡಿದ್ದಾರೆ.