ಹೈದರಾಬಾದ್:ಕನ್ನಡ, ತೆಲುಗು ಸಿನಿಮಾಗಳಲ್ಲಿ ಬೇಡಿಕೆ ಪಡೆದಿರುವ ನಟಿ ಶ್ರೀಲೀಲಾ ಇದೀಗ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಚಿತ್ರದಲ್ಲೇ ನಟ ಅಜಿತ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಎಂಬ ಇಂಗ್ಲಿಷ್ ಟೈಟಲ್ ಹೊಂದಿರುವ ಪ್ಯಾನ್ ಇಂಡಿಯಾ ಸಿನಿಮಾಗೆ ಅವರು ನಟಿಸಲು ಸಜ್ಜಾಗಿದ್ದಾರೆ. ಈ ಸಂಬಂಧ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ. 'ಗುಡ್ ಬ್ಯಾಡ್ ಅಗ್ಲಿ' ಇದೇ ಜೂನ್ನಲ್ಲಿ ಶೂಟಿಂಗ್ ಆರಂಭಿಸಲಿದೆ. ಚಿತ್ರದಲ್ಲಿ ಅಜಿತ್ ಕುಮಾರ್ ಮೂರು ಪಾತ್ರದಲ್ಲಿ ಕಾಣಿಸಲಿದ್ದು, ಇದೊಂದು ಆ್ಯಕ್ಷನ್ ಆಧಾರಿತ ಥ್ರಿಲ್ಲರ್ ಚಿತ್ರವಾಗಿದೆ.
ಶ್ರೀಲೀಲಾ ಅಭಿನಯದ ತೆಲುಗಿನ 'ಧಮಾಕ' ಮತ್ತು 'ಸ್ಕಂದ' ಹೇಳಿಕೊಳ್ಳುವ ಹಿಟ್ ಕಾಣದಿದ್ದರೂ, ಚಿತ್ರದ ಸ್ಟೋರಿಲೈನ್ ಉತ್ತಮವಾಗಿದ್ದು, ಅವರ ನಟನೆಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.
'ಗುಡ್ ಬ್ಯಾಡ್ ಅಗ್ಲಿ' ಶೀರ್ಷಿಕೆಯೇ ಹೇಳುವಂತೆ ಚಿತ್ರದಲ್ಲಿ ನಟನ ಮೂರು ಭಿನ್ನ ಸ್ವರೂಪಗಳನ್ನು ಕಾಣಬಹುದಾಗಿದೆ. 2006ರಲ್ಲಿ 'ವರಲಾರು' ಸಿನಿಮಾ ಬಳಿಕ 18 ವರ್ಷದ ನಂತರ ಅಜಿತ್ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಗುಡ್ ಬ್ಯಾಡ್ ಅಗ್ಲಿ' ಬಗ್ಗೆ ಈಗಾಗಲೇ ಅಜಿತ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ.
'ಗುಡ್ ಬ್ಯಾಡ್ ಅಗ್ಲಿ'ಗೆ ಅಧಿಕ್ ರವಿಚಂದ್ರನ್ ನಿರ್ದೇಶನವಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ಸಂಯೋಜನ ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಅಭಿನಂದನ್ ರಾಮನುಜಮ್ ಸಿನಿಮಾಟೋಗ್ರಾಫಿ ಇದ್ದು, ವಿಜಯ್ ಮೆಲುಕ್ಕುಟ್ಟಿ ಸಂಕಲನವಿದೆ. ನವೀನ್ ಮೈತ್ರಿ ಬಂಡವಾಳ ಹೂಡಿದ್ದು, ಮೈತ್ರಿ ಮೂವಿ ಮೇಕರ್ ಬ್ಯಾನರ್ನಲ್ಲಿ ಸಿನಿಮಾ ಮೂಡಿಬರುತ್ತಿದೆ.
ಇದರ ಹೊರತಾಗಿ ಅಜಿತ್ 'ವಿಡಾ ಮುಯರ್ಚಿ' ಎಂಬ ಮತ್ತೊಂದು ಥ್ರಿಲ್ಲರ್‌ನಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಮಾಗಿಜ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ನಿರ್ಮಿಸಲಿದೆ. ಚಿತ್ರದಲ್ಲಿ ನಟಿ ತ್ರಿಶಾ ಕೃಷ್ಣನ್, ಅರ್ಜುನ್ ಸರ್ಜಾಮ ಅರವ್ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರದಲ್ಲಿದ್ದಾರೆ. ಅನಿರುದ್ ರವಿಚಂದ್ರನ್ ಸಂಗೀತ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ಧನುಷ್ ನಟನೆಯ 'ಕುಬೇರ'ನ ಸುತ್ತ ಕುತೂಹಲ: ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ