ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ ಹಾಗೂ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಳ್ಳುವ ಏಕೈಕ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇದುವರೆಗೂ ಪುಟ್ಟಣ್ಣ ಕಣಗಾಲ್ ಬೆಳೆದ ಎತ್ತರಕ್ಕೆ ಕನ್ನಡದ ಯಾವ ನಿರ್ದೇಶಕರೂ ಏರಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ರಾಜ್ಯ ಸರ್ಕಾರ ಕನ್ನಡ ಚಲನಚಿತ್ರ ನಿರ್ದೇಶಕರಿಗೆ ಎಸ್. ಆರ್. ಪುಟ್ಟಣ್ಣ ಕಣಗಾಲ್ ಹೆಸರಲ್ಲಿ ಕೊಡುತ್ತಿರುವ ಪ್ರಶಸ್ತಿಯೇ ಇದಕ್ಕೆ ಸಾಕ್ಷಿ.
ಪುಟ್ಟಣ್ಣ ಕಣಗಾಲ್ ಜೀವನ, ವೈವಿಧ್ಯಮಯ ಬದುಕು, ಅವರು ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಮಾದರಿ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅವರು ಮಾಡಿರುವ ಚಿತ್ರಗಳು ಬುನಾದಿ ಎಂದೇ ಹೇಳಬಹುದು. ಇಂತಹ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನ ಇಂದು.
1933 ಡಿಸೆಂಬರ್ 1ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ ಪುಟ್ಟಣ್ಣ ಕಣಗಾಲ್ ಜನಿಸಿದರು. ಇವತ್ತು ಪುಟ್ಟಣ್ಣ ಕಣಗಾಲ್ ಬದುಕಿದ್ದರೆ 91ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ನಿರ್ದೇಶಕ ಸಂಘದ ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಸಭಾಭವನದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹುಟ್ಟಿದ ದಿನ ಸ್ಮರಣೆ ಮಾಡಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ಸಂಘ ಕಟ್ಟಿದವರು ಇದೇ ಪುಟ್ಟಣ್ಣ ಕಣಗಾಲ್.
ಚಿಕ್ಕಂದಿನಿಂದ ನಾಟಕ, ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದ ಪುಟ್ಟಣ್ಣ ಕೊನೆಗೂ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡರು. ಪುಟ್ಟಣ್ಣ ಅವರು ಚಿತ್ರರಂಗಕ್ಕೆ ಬರುವ ಮುನ್ನ ನಾಟಕ ಕಂಪನಿಯಲ್ಲಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ 31ನೇ ವಯಸ್ಸಿನಲ್ಲಿ ಗುರುಗಳಾದ ಬಿ. ಆರ್. ಪಂತುಲು ಅವರ ಬೆಂಬಲದಿಂದ ಮಲಯಾಳಂ ಭಾಷೆಯಲ್ಲಿ ಸ್ಕೂಲ್ ಮಾಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಚಿತ್ರ ಮುಂದೆ ಕನ್ನಡದಲ್ಲಿ ಕೂಡಾ ತಯಾರಾಗಿ ಹೆಸರು ಗಳಿಸಿತು. ವಿಶೇಷ ಎಂದರೆ ಮಲಯಾಳಂ ಸ್ಕೂಲ್ ಮಾಸ್ಟರ್ ಚಿತ್ರವನ್ನು ಬಿ. ಆರ್. ಪಂತುಲು ನಿರ್ದೇಶಿಸಬೇಕಿತ್ತು. ಆದರೆ ಶಿಷ್ಯ ಪುಟ್ಟಣ್ಣ ಅವರಿಗೆ ಚಿತ್ರದ ಮೇಲಿದ್ದ ಪ್ರೀತಿ, ಚಾಕಚಕ್ಯತೆ, ಪರಿಶ್ರಮ ಕಂಡು ತಾವು ಮಾಡಬೇಕಿದ್ದ ಚಿತ್ರವನ್ನು ಅವರಿಗೆ ನೀಡಿದರು.
3 ಮಲಯಾಳಂ ಚಿತ್ರಗಳು, 1 ತೆಲುಗು ಸಿನಿಮಾ ನಿರ್ದೇಶನ ಮಾಡಿದ ನಂತರ 1966ರಲ್ಲಿ ಬೆಳ್ಳಿ ಮೋಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು ಪುಟ್ಟಣ್ಣ. ಬೆಳ್ಳಿ ಪರದೆಯಲ್ಲಿ ಕೇವಲ ಸಿನಿಮಾ ನಾಯಕರು ಪಡೆಯುತ್ತಿದ್ದ ಶಿಳ್ಳೆ, ಚಪ್ಪಾಳೆ ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ದೊರೆಯಿತು.