ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ರತಾನ್ಸಿ ತಮ್ಮ ಮದುವೆ ಬಗ್ಗೆ ಮೌನ ಮುಂದುವರಿಸಿದ್ದಾರೆ. ಆದ್ರೆ ಈ ವಿಚಾರದ ಸುತ್ತಲಿನ ಅಂತೆ-ಕಂತೆಗಳು ಜೋರಾಗೆ ಕೇಳಿಬರುತ್ತಿವೆ. ಲೇಟೆಸ್ಟ್ ಮಾಹಿತಿ ಪ್ರಕಾರ, ಜೂನ್ 23 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಿದೆ. ಮದುವೆ ನಂತರ, ಆಪ್ತರಿಗಾಗಿ ಸಂಭ್ರಮಾಚರಣೆ ಇಟ್ಟುಕೊಳ್ಳುವ ಸಾಧ್ಯತೆಗಳಿವೆ. ಮದುವೆಗೆ ಸಂಬಂಧಿಸಿದ ಈ ಎಲ್ಲದಕ್ಕೂ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ವರದಿಗಳ ಪ್ರಕಾರ, ಸೋನಾಕ್ಷಿ ಮತ್ತು ಜಹೀರ್ ಅದ್ಧೂರಿ ಮದುವೆಗೆ ಬದಲಾಗಿ ರಿಜಿಸ್ಟರ್ ಮ್ಯಾರೇಜ್‌ಗೆ ಮುಂದಾಗಿದ್ದಾರೆ. ಬಳಿಕ ಈ ಜೋಡಿ ಜೂನ್ 23ರಂದು ತಮ್ಮವರಿಗಾಗಿ ಸಂಜೆ ಪಾರ್ಟಿ ಆಯೋಜಿಸಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬಗ್ಗೆ ಉಲ್ಲೇಖಿಸಲಾಗಿಲ್ಲ, ಅತಿಥಿಗಳನ್ನು ಕೇವಲ ಪಾರ್ಟಿಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಮದುವೆ ಶಾಸ್ತ್ರಗಳು ಕೇವಲ ಕುಟುಂಬಸ್ಥರಿಗೆ ಸೀಮಿತವಾಗಿರಬಹುದು. ಅಗತ್ಯ ಶಾಸ್ತ್ರ ನೆರವೇರಿಸಿ ನಂತರ ರಿಜಿಸ್ಟರ್ ಮ್ಯಾರೇಜ್ ಆಗುವ ಸಾಧ್ಯತೆಗಳಿವೆ.
ಸಿನ್ಹಾ ಮತ್ತು ರತಾನ್ಸಿ ಕುಟುಂಬಸ್ಥರಲ್ಲದೇ, ಬಾಲಿವುಡ್ನ ಅನೇಕರು ಮದುವೆ ನಂತರದ ಈ ಸೆಲೆಬ್ರೇಶನ್ನಲ್ಲಿ ಭಾಗಿಯಾಗಲಿದ್ದಾರೆ. ಆಯುಷ್ ಶರ್ಮಾ, ಹುಮಾ ಖುರೇಷಿ, ವರುಣ್ ಶರ್ಮಾ ಸೇರಿದಂತೆ ಗೆಳೆಯರು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ. ಅಲ್ಲದೇ ಸೋನಾಕ್ಷಿ ನಟನೆಯ 'ಹೀರಾಮಂಡಿ' ಟೀಮ್ ಕೂಡ ಗೆಸ್ಟ್ ಲಿಸ್ಟ್ನಲ್ಲಿದ್ದಾರೆ. ಚಿತ್ರೀಕರಣ ಮತ್ತು ಪ್ರೋಮೋ, ಪ್ರಮೋಶನ್ ಸಂದರ್ಭ ಚಿತ್ರತಂಡದೊಂದಿಗಿನ ತಮ್ಮ ಬಾಂಧವ್ಯವನ್ನು ಸೋನಾಕ್ಷಿ ಪ್ರದರ್ಶಿಸಿದ್ದಾರೆ. ಅದರಂತೆ, ಸಂಜಯ್ ಲೀಲಾ ಬನ್ಸಾಲಿ, ಫರ್ದೀನ್ ಖಾನ್, ತಾಹಾ ಶಾ ಬಾದುಶಾ, ಅದಿತಿ ರಾವ್ ಹೈದರಿ, ಶರ್ಮಿನ್ ಸೆಹಗಲ್ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ.