''ಬಿಗ್ ಬಾಸ್ ಸೀಸನ್ 11''ರ ಹತ್ತನೇ ವಾರದ ಆಟ ಸಾಗಿದೆ. ಒಂಭತ್ತನೇ ವಾರಾಂತ್ಯದ ಸಂಚಿಕೆಯಲ್ಲಿ ಟ್ವಿಸ್ಟ್ ಒಂದು ನಡೆದಿದ್ದು, ಶೋಭಾ ಶೆಟ್ಟಿ ಸ್ವಇಚ್ಛೆಯಿಂದ ಮನೆಯಿಂದ ಹೊರಬಂದಿದ್ದಾರೆ. ಆಟ ಆಡುವ ಮನಸ್ಸಿದ್ದರೂ, ಆರೋಗ್ಯ ಸಹಕರಿಸಿದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ 50 ದಿನಗಳು ಪೂರ್ಣಗೊಂಡಿದ್ದಂತ ಹೊತ್ತಲ್ಲಿ ವೈಲ್ಡ್ ಕಾರ್ಡ್ ಮೂಲಕ ಹೋದ ನಟಿ ಶೋಭಾ ಶೆಟ್ಟಿ ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಗಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಹೀಗೆ ಹೊರಬಂದಿದ್ದು ಬಿಗ್ ಬಾಸ್ ಇತಿಹಾಸದಲ್ಲಿ ಬಹುಶಃ ಇದೇ ಮೊದಲು ಎನ್ನಬಹುದು. ಮನೆಯಿಂದ ಹೊರಬಂದಿರುವ ಅವರೀಗ ನಿರೂಪಕ ಸುದೀಪ್, ಬಿಗ್ ಬಾಸ್ ತಂಡ ಮತ್ತು ಕನ್ನಡಿಗರನ್ನುದ್ದೇಶಿಸಿ ಮಾತನಾಡಿದ್ದಾರೆ.
ಪತ್ರದಲ್ಲೇನಿದೆ?ನಟಿ ಶೋಭಾ ಶೆಟ್ಟಿ ಹೆಸರಿನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ಶೇರ್ ಆಗಿರುವ ಪೋಸ್ಟ್ನಲ್ಲಿ, ''ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆ ಇದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ, ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಾಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ!. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರ ಆಗಿದ್ದರೆ, ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗೂ ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ನಿಮ್ಮ ಪ್ರೀತಿಯ ಶೋಭಾ ಶೆಟ್ಟಿ'' ಎಂದು ಬರೆದುಕೊಂಡಿದ್ದಾರೆ.
ಆಗಿದ್ದೇನು?ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆ ಭಾನುವಾರ ರಾತ್ರಿ ಪ್ರಸಾರವಾಯಿತು. ಎಂದಿನಂತೆ ಎಪಿಸೋಡ್ ಕೊನೆಗೆ ಎಲಿಮಿನೇಷನ್ ಒಂದು ಆಗಬೇಕಿತ್ತು. ಅಂದಿನ ಮನರಂಜನೆ ಮುಗಿದ ಬಳಿಕ ಸುದೀಪ್ ಅವರು ಎಲಿಮಿನೇಷನ್ ವಿಚಾರವೆತ್ತಿದರು. ಬಹುಮತಗಳೊಂದಿಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಬೇಗನೇ ಸೇವ್ ಆದ್ರು. ಇವರ ಬಳಿಕ ಎಲಿಮಿನೇಷನ್ಗೆ ನಾಮಿನೇಟ್ ಆದವರ ಪೈಕಿ ಚೈತ್ರಾ, ಶಿಶಿರ್, ಐಶ್ವರ್ಯಾ ಉಳಿದುಕೊಂಡಿದ್ದರು. ಸೇವ್ ಆದ ಸಂದರ್ಭ ಸರ್ವರಿಗೂ ಧನ್ಯವಾದ ಅರ್ಪಿಸಿದ ಶೋಭಾ ಶೆಟ್ಟಿ, ನನ್ನಿಂದ ಇರಲು ಆಗುತ್ತಿಲ್ಲ ಎಂಬಂತೆ ಮಾತು ಶುರು ಮಾಡಿದ್ರು.