'ಕಾಲಾಪತ್ಥರ್' ಈ ಹೆಸರು ಕೇಳಿದಾಕ್ಷಣ ಬಾಲಿವುಡ್ನ ಬಿಗ್ ಬಿ ಜನಪ್ರಿಯತೆಯ ಅಮಿತಾಭ್ ಬಚ್ಚನ್ ಅಭಿನಯದ ಹಿಟ್ ಸಿನಿಮಾ ನೆನಪಾಗುತ್ತದೆ. ಇದೇ ಶೀರ್ಷಿಕೆಯ ಮೇಲೆ ಕನ್ನಡದಲ್ಲಿ ಸಿನಿಮಾ ಬರುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ. ಕೆಂಡಸಂಪಿಗೆ ಚಿತ್ರ ಖ್ಯಾತಿಯ ವಿಕ್ಕಿ ವರುಣ್ ನಿರ್ದೇಶಿಸಿ ಹಾಗೂ ಅಭಿನಯಿಸಿರುವ ಕಾಲಾಪತ್ಥರ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪೌಡರ್ ಸಿನಿಮಾ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಧನ್ಯಾ ರಾಮಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಹಾಡುಗಳಿಂದ ಗಮನ ಸೆಳೆದಿರುವ ಕಾಲಾಪತ್ಥರ್ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಈವೆಂಟ್ ಅನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಸಾಕ್ಷಿಯಾದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾ ಯಶ ಕಾಣಲೆಂದು ಶುಭ ಹಾರೈಸಿದರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಕಾಲಾಪತ್ಥರ್ ಚಿತ್ರದ ಟ್ರೇಲರ್ ಬಹಳ ಚೆನ್ನಾಗಿದೆ. ಚಿತ್ರ ಖಂಡಿತ ಸೂಪರ್ ಹಿಟ್ ಆಗಲಿದೆ ಎಂದು ಹಾರೈಸಿದರು.
ನಟ ಹಾಗೂ ನಿರ್ದೇಶಕ ವಿಕ್ಕಿ ವರುಣ್ ಮಾತನಾಡಿ, ನಾನು ನಟ ಆಗಬೇಕೆಂದುಕೊಂಡವನಲ್ಲ. ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದವನು. ದುನಿಯಾ ಸೂರಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತೇನೆ. ಇನ್ನು ಕಡ್ಡಿಪುಡಿ ಚಿತ್ರದ ಸಮಯದಲ್ಲಿ ಶಿವಣ್ಣ ಅವರು ಮಾತಾನಾಡಿಸಿದ್ದು ಹಾಗೂ ಅವರ ಜೊತೆ ಒಂದು ದೃಶ್ಯದಲ್ಲಿ ಅಭಿನಯಿಸಿದ್ದು ಮರೆಯಲಾಗದ ಕ್ಷಣ. ಇಂದು ಅವರೇ ನನ್ನ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಮತ್ತಷ್ಟು ಸಂತೋಷವಾಗಿದೆ ಎಂದರು.