ಕರುನಾಡ ಚಕ್ರವರ್ತಿ ಖ್ಯಾತಿಯ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ಶಿವರಾಜ್ಕುಮಾರ್ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ನಂತರ ಅಲ್ಲೇ ಕೆಲ ದಿನಗಳವರೆಗೆ ಸೂಕ್ತ ಚಿಕಿತ್ಸೆ, ವಿಶ್ರಾಂತಿ ಪಡೆದಿದ್ದಾರೆ. ಕ್ಯಾನ್ಸರ್ ಗೆದ್ದಿರುವ ಶಿವಣ್ಣ ಇಂದು ರಾಜ್ಯಕ್ಕೆ ವಾಪಸ್ ಆಗಲಿದ್ದು, ಮೆಚ್ಚಿನ ನಟನನ್ನು ಸ್ವಾಗತಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ದುನಿಯಾ ವಿಜಯ್ ಪೋಸ್ಟ್: ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ದುನಿಯಾ ವಿಜಯ್ ಅವರು ಹ್ಯಾಟ್ರಿಕ್ ಹೀರೋನನ್ನೊಳಗೊಂಡ ಪೋಸ್ಟರ್ ಒಂದನ್ನು ಶೇರ್ ಮಾಡಿದ್ದಾರೆ. ಪೋಸ್ಟರ್ ಮೇಲೆ ಶಿವಣ್ಣ ಈಸ್ ಬ್ಯಾಕ್ ಎಂದು ಬರೆಯಲಾಗಿದೆ. ಜೊತೆಗೆ, ಹಾಲಾಹಲ ಕುಡಿದ ಶಿವನಿಗೆ ಯಾರ ಭಯ?. ಪಾರ್ವತಮ್ಮನ ಎದೆಹಾಲು ಕುಡಿದ ಶಿವಣ್ಣನಿಗೆ ಯಾವ ಭಯ?. ಪ್ರಶ್ನೆ ಮಾಡಿದ್ದು ಕ್ಯಾನ್ಸರ್, ಶಿವಣ್ಣ ಕೊಟ್ಟಿದ್ದಾಯಿತು ಆನ್ಸರ್. ವಿಶ್ವದಾದ್ಯಂತ ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಕಂಡು, ವೈದ್ಯರ ಚಿಕಿತ್ಸೆ ಯಶಕಂಡು ನಮ್ಮ ಗಂಡುಗಲಿ, ಶತಚಿತ್ರಗಳ ಅಧಿಪತಿ, ದೊಡ್ಮನೆಯ ದೊರೆ, ಹ್ರ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಇದೇ 26ರಂದು ನಮ್ಮ ನಾಡಿಗೆ ಮರಳುತ್ತಿದ್ದಾರೆ. ಅವರ ಕಟ್ಟಾಭಿಮಾನಿಯಾಗಿ ಸ್ವಾಗತ ಕೋರುತ್ತಿದ್ದೇನೆ - ನಿಮ್ಮ ವಿಜಯ ಕುಮಾರ್ ಎಂದು ಬರೆದುಕೊಂಡಿದ್ದಾರೆ.
ಶಿವಣ್ಣನ ಸ್ವಾಗತಕ್ಕೆ ಫ್ಯಾನ್ಸ್ ರೆಡಿ: ಇಂದು ಶಿವಣ್ಣನನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಸಜ್ಜಾಗಿದ್ದಾರೆ. ಏರ್ಪೋರ್ಟ್, ನಟನ ನಿವಾಸದ ಬಳಿ ಹೆಚ್ಚಿನ ಸಂಖ್ಯೆಯ ಜನರು ಬಂದು ಸೇರುವ ಸಾಧ್ಯತೆಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ಗ್ರ್ಯಾಂಡ್ ವೆಲ್ಕಮ್ಗೆ ಸಂಬಂಧಿಸಿದ ಪೋಸ್ಟ್ಗಳು ಹರಿದಾಡುತ್ತಿವೆ.