ಹಾವೇರಿ: ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕುರಿಗಾಯಿ ಹನುಮಂತು ಅವರೀಗ ಬಿಗ್ ಬಾಸ್ ವಿಜೇತ. ಅತ್ಯಂತ ಜನಪ್ರಿಯ ರಿಯಾಲಿಟಿ ಶೋನಲ್ಲಿ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿಯ ಹನುಮಂತ ಲಮಾಣಿ ಗೆದ್ದು ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ಹನುಮಂತು ಹೆಚ್ಚಿನ ವಿದ್ಯಾಭ್ಯಾಸ ಪಡೆದಿಲ್ಲ. ಕಡುಬಡತನದ ಕುಟುಂಬದಲ್ಲಿ ಬೆಳೆದ ಇವರು, ಕುರಿ ಕಾಯುವ ಕೆಲಸ ಮಾಡುತ್ತಾರೆ. ಕುರಿ ಕಾಯುತ್ತಾ ಶಿಶುನಾಳ ಶರೀಫರ ನಿನ್ನೊಳಗ ನೀನು ತಿಳದ ನೋಡಣ್ಣ ಹಾಗೂ ಕೇಳ ಜಾಣ ಶಿವ ಧ್ಯಾನ ಮಾಡಣ್ಣ ಎಂಬ ಹಾಡುಗಳನ್ನು ಹಾಡುತ್ತಿದ್ದರು. ಹನುಮಂತನ ಹಾಡುಗಳು ಖಾಸಗಿ ವಾಹಿನಿಯ ಸರಿಗಮಪ ವೇದಿಕೆ ಪ್ರವೇಶಿಸಿದ್ವು. ಇವರ ಹಾಡು ಕೇಳಿದ ತೀರ್ಪುಗಾರರು ಹನುಮಂತನ ಪ್ರತಿಭೆಗೆ ಫಿದಾ ಆಗಿಬಿಟ್ರು. ಈ ಜನಪ್ರಿಯ ವೇದಿಕೆಯಲ್ಲಿ ಭರ್ಜರಿಯಾಗಿ ಮಿಂಚಿ ಸಖತ್ ಫೇಮಸ್ ಆಗಿದ್ದ ಹನುಮಂತು ಅವರೀಗ ಕನ್ನಡ ಕಿರುತರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮದ ವಿಜೇತರಾಗಿದ್ದಾರೆ.
ಬಿಗ್ ಬಾಸ್ 11ನೇ ಸೀಸನ್ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತು ತಮ್ಮ ಜವಾರಿ ಭಾಷೆ, ದಾಡಿ ಬಿಟ್ಟ ನೋಟ, ಪಂಚೆ ಅಂಗಿಯ ಸರಳ ನೋಟದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಸರಳತೆ, ಮುಗ್ಧತೆಯಿಂದ ಬಿಗ್ ಬಾಸ್ ಮನೆಯಲ್ಲಿ ಆಟವಾಡಿ ಕೋಟ್ಯಂತರ ಕನ್ನಡಿಗರ ಮನಗೆದ್ದರು. ಆನ್ಲೈನ್ ಮೂಲಕ ನಡೆದ ವೋಟಿಂಗ್‌ನಲ್ಲಿ 5.23 ಕೋಟಿ ಮತಗಳನ್ನು ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಹನುಮಂತು ಅವರು ಪಡೆದುಕೊಂಡಿರುವ ಮತಗಳು ಬಿಗ್ ಬಾಸ್ ಇತಿಹಾಸದಲ್ಲೇ ಅತ್ಯಧಿಕ ಮತಗಳಾಗಿವೆ.
ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ಹಳ್ಳಿ ಹೈದ ಹನುಮಂತು: ಸುದೀಪ್ ಕೈಯಿಂದ ಟ್ರೋಫಿ ಸ್ವೀಕರಿಸಿದ ಕೊನೆಯ ವಿಜೇತ
ಅವರ ಬಿಗ್ ಬಾಸ್ ಪಯಣದಲ್ಲಿ ಹೈಲೆಟ್ ಆಗಿದ್ದೇ ಸರಳತೆ. ನಿರೂಪಕ ಕಿಚ್ಚ ಸುದೀಪ್ ಅವರು ಹನುಮಂತನ ಕೈ ಮೇಲೆತ್ತಿ ವಿಜೇತ ಎಂದು ಘೋಷಿಸುತ್ತಿದ್ದಂತೆ ಹನುಮಂತು ಮತ್ತದೇ ಸರಳತೆ, ಮುಗ್ಧತೆಯಿಂದ ಕಿಚ್ಚನ ಪಾದ ಸ್ಪರ್ಶಿಸಿ ತಮ್ಮ ಗೆಲುವಿನ ಖುಷಿ ಹಂಚಿಕೊಂಡರು. ಈ ಗೆಲುವು ಕನ್ನಡಿಗರ ಗೆಲುವು ಎಂಬಷ್ಟು ಸಂತಸ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತವಾಗುತ್ತಿದೆ. ಹೊರರಾಜ್ಯ, ಹೊರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಹ ಹನುಮಂತು ಬಿಗ್ ಬಾಸ್ ಟ್ರೋಫಿ ಹಿಡಿದುಕೊಂಡಿದ್ದು ನೋಡಿ ಸಂಭ್ರಮಾಚರಿಸಿದ್ದಾರೆ.
ಇದನ್ನೂ ಓದಿ: 5.23 ಕೋಟಿಗೂ ಹೆಚ್ಚು ಮತ ಪಡೆದ ಬಿಗ್ಬಾಸ್ ವಿನ್ನರ್ ಹನುಮಂತುಗೆ ಸಿಕ್ಕ ಹಣವೆಷ್ಟು?
ಕೇವಲ ಐದನೇ ತರಗತಿಯಲ್ಲಿ ಓದಿರುವ ಹನುಮಂತು ಪ್ರತಿದಿನ ರಾತ್ರಿ ಭಜನೆಗೆ ಹೋಗುತ್ತಿದ್ದರು. ಆರಂಭದಲ್ಲಿ ಭಜನೆ ಪದಗಳನ್ನು ಕೇಳುತ್ತಾ ಬೆಳೆದ ಹುಡುಗ, ಬರುಬರುತ್ತಾ ತಾನೇ ಭಜನೆ ಮನೆಯಲ್ಲಿ ಪೆಟ್ಟಿಗೆ ಹಿಡಿದು ಬಾರಿಸುತ್ತಾ ಹಾಡು ಹಾಡಲು ಶುರು ಮಾಡಿದ್ರು. ಅಲ್ಲೂ ತನ್ನ ಕಂಠಸಿರಿಯಿಂದ ಜನಪ್ರಿಯರಾದರು. ಭಜನೆ, ಶಿಶುನಾಳ ಶರೀಫರ ಗೀತೆಗಳನ್ನು ಹಾಡುತ್ತಿದ್ದ ಹನುಮಂತು ನೋಡನೋಡುತ್ತಲೇ ಸಖತ್ ಫೇಮಸ್ ಆಗಿಬಿಟ್ಟರು. ಇದೀಗ ಬಿಗ್ ಬಾಸ್ ಗೆದ್ದು 50 ಲಕ್ಷ ರೂಪಾಯಿ ನಗದು ಕೂಡ ಹನುಮಂತುಗೆ ಸೇರಿದೆ. ವೇದಿಕೆ ಮುಂಭಾಗದಲ್ಲಿದ್ದ ಹನುಮಂತುನ ತಂದೆ, ತಾಯಿ ಖುಷಿಖುಷಿಯಿಂದ ಅಲ್ಲೇ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅವರ ಮನೆಯವರು, ಅಭಿಮಾನಿಗಳು ವೇದಿಕೆ ಮೇಲೇರಿ ಹನುಮಂತುನನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು. ಒಟ್ಟಿನಲ್ಲಿ ಹನುಮಂತುವೀಗ ಕನ್ನಡಿಗರ ಮನೆ ಮಾತಾಗಿದ್ದಾರೆ.
ಇದನ್ನೂ ಓದಿ; ಹನುಮಂತನ ಊರಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್ಸ್ : ಮಗನಿಗೆ ವೋಟ್ ಹಾಕುವಂತೆ ಅಪ್ಪ-ಅವ್ವನ ಮನವಿ