'ಆರ್ಆರ್ಆರ್' ಭರ್ಜರಿ ಯಶಸ್ಸಿನ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಮ್ ಚರಣ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಗೇಮ್ ಚೇಂಜರ್'. ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಟೀಸರ್ ಲಾಂಚ್ ಈವೆಂಟ್ ಅದ್ಧೂರಿಯಾಗಿ ಜರುಗಿದ್ದು, ಅಭಿಮಾನಿಗಳ ಮನಸೂರೆಗೊಂಡಿತ್ತು. ಇದೀಗ ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದು ಟ್ರೆಂಡಿಂಗ್ನಲ್ಲಿದೆ.
ನಿರ್ದೇಶಕ ಶಂಕರ್ ತಮ್ಮ ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಾರೆ. ಆಡಿಯೋ ರಿಲೀಸ್ ಮತ್ತು ಪ್ರಿ-ರಿಲೀಸ್ ಕಾರ್ಯಕ್ರಮಗಳಿಗೆ ಪ್ರಸಿದ್ಧ ತಾರೆಯರನ್ನು ಆಹ್ವಾನಿಸಿದ ಅನೇಕ ಉದಾಹರಣೆಗಳಿವೆ. ಹೀಗೆ ಮುಂದಿನ 'ಗೇಮ್ ಚೇಂಜರ್' ಚಿತ್ರದ ಪ್ರೀ ರಿಲೀಸ್ ಈವೆಂಟ್ಗೂ ಶಂಕರ್ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಈ ಬಾರಿ ಕಾರ್ಯಕ್ರಮಕ್ಕೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರನ್ನು ಆಹ್ವಾನಿಸಲು ಮುಂದಾಗಿದ್ದಾರೆ. ಆದ್ರೆ ಈ ವದಂತಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ದ್ವಿಪಾತ್ರದಲ್ಲಿ ರಾಮ್ಚರಣ್:ಈ ಬಹುನಿರೀಕ್ಷಿತ ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಎಎಸ್ ಅಧಿಕಾರಿಯಾಗಿ ರಾಮ್ ಚರಣ್ ಗೂಂಡಾಗಳನ್ನು ಹೇಗೆ ಎದುರಿಸಿಸುತ್ತಾರೆ ಅನ್ನೋದು ಸಿನಿಮಾದ ಕಥೆ. ಮತ್ತೊಂದು ಪಾತ್ರದಲ್ಲಿ ರೈತ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಸಿನಿಮಾ ವೀಕ್ಷಿಸುವ ಕಾತರ ಹೆಚ್ಚಿದೆ.